ಕೊಪ್ಪ ತಾಲೂಕು ಕೇಂದ್ರಕ್ಕೆ ಪ್ರಸ್ತಾವನೆ: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : Oct 9, 2024 1:37 AM

ಸಾರಾಂಶ

ಹೋಬಳಿ ಕೇಂದ್ರವಾದ ಕೊಪ್ಪ ಗ್ರಾಮ ಜನಸಂಖ್ಯೆ ಮತ್ತು ಅಭಿವೃದ್ಧಿ ವೇಗದಲ್ಲಿ ಸಾಗುತ್ತಿದೆ. ಗ್ರಾಮದ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರು ಕಚೇರಿ ಮತ್ತು ನ್ಯಾಯಾಲಯಗಳ ಕೆಲಸ ಕಾರ್ಯಗಳಿಗೆ ತಾಲೂಕು ಕೇಂದ್ರವಾದ ಮದ್ದೂರಿಗೆ ಹೋಗಿ ಬರಲು ದೂರವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೊಪ್ಪ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಪಡಿಸುವಂತೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.

ತಾಲೂಕಿನ ಕೊಪ್ಪ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದ ಸಚಿವರನ್ನು ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದಿಸಿದ ಬಳಿಕ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಮಾಡಿ ಅಭಿವೃದ್ಧಿ ಪಡಿಸುವಂತೆ ಮನವಿ ಸಲ್ಲಿಸಿದರು.

ಹೋಬಳಿ ಕೇಂದ್ರವಾದ ಕೊಪ್ಪ ಗ್ರಾಮ ಜನಸಂಖ್ಯೆ ಮತ್ತು ಅಭಿವೃದ್ಧಿ ವೇಗದಲ್ಲಿ ಸಾಗುತ್ತಿದೆ. ಗ್ರಾಮದ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರು ಕಚೇರಿ ಮತ್ತು ನ್ಯಾಯಾಲಯಗಳ ಕೆಲಸ ಕಾರ್ಯಗಳಿಗೆ ತಾಲೂಕು ಕೇಂದ್ರವಾದ ಮದ್ದೂರಿಗೆ ಹೋಗಿ ಬರಲು ದೂರವಾಗುತ್ತಿದೆ. ಹೀಗಾಗಿ ಕೊಪ್ಪ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಮಾಡಿ ಮೂಲ ಸೌಲಭ್ಯ ಕಲ್ಪಿಸುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಸಚಿವ ಚಲುವರಾಯಸ್ವಾಮಿ, ಕೊಪ್ಪ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಅಭಿವೃದ್ಧಿಪಡಿಸುವ ಸಂಬಂಧ ಸರ್ಕಾರ. ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.

ಇದೇ ವೇಳೆ ಸದಸ್ಯರು ಗ್ರಾಮ ಪಂಚಾಯ್ತಿಯ ನೂತನ ಕಟ್ಟಡ ನಿರ್ಮಾಣ, ಆವರಣ ಮತ್ತು ಸಂತೆ ಮೈದಾನ ಅಭಿವೃದ್ಧಿ ಅಲ್ಲದೇ, ಸಮುದಾಯ ಭವನದ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರದಿಂದ ಆರ್ಥಿಕ ಅನುದಾನ ದೊರಕಿಸಿ ಕೊಡುವಂತೆ ಕೋರಿದರು.

ಸಮೀಪದ ಬೆಕ್ಕಳಲೆ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರು ಸರ್ವೆ ನಂಬರ್ 106 ನಲ್ಲಿರುವ ಸ್ಮಶಾನವನ್ನು ದಲಿತ ಮುಖಂಡ ರಮಾನಂದ ಅತಿಕ್ರಮ ಪ್ರವೇಶ ಮಾಡಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಸಚಿವ ಚಲುವರಾಯಸ್ವಾಮಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ತಾಕೀತು ಮಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ.ರುದ್ರೇಶ. ಉಪಾಧ್ಯಕ್ಷ ಸಾವಿತ್ರಿ ಸುರೇಶ್. ಕವಿತಾ ದಿವಾಕರ್. ಕುಮಾರ್ ಕೊಪ್ಪ, ಮಮತಾ, ಜ್ಯೋತಿ, ನವೀನ್ ಕುಮಾರ್, ಸಂತೋಷ್ ಕೊಟ್ಟಿಗೆ, ಡಿಸಿಸಿ ಬ್ಯಾಂಕ್ ಜೋಗಿ ಗೌಡ, ಮುಖಂಡರಾದ ಕೆ. ಎನ್.ದಿವಾಕರ್, ಬಿ. ಎಂ.ರಘು, ತಗ್ಗಹಳ್ಳಿ ಚಂದ್ರು, ಎಚ್.ಜಿ.ರಾಮಚಂದ್ರ ಇದ್ದರು.

Share this article