ಕನ್ನಡಪ್ರಭ ವಾರ್ತೆ ಮಂಡ್ಯ
ಕ್ಯಾನ್ಸರ್ ಆಸ್ಪತ್ರೆಗೆ ಅಗತ್ಯವಿದ್ದ ೨೧೯ ಹುದ್ದೆಗಳ ಪ್ರಸ್ತಾವನೆಯನ್ನು ಪುನರ್‌ಪರಿಶೀಲನೆಗೆ ವಾಪಸ್ ಕಳುಹಿಸಿರುವ ಹಣಕಾಸು ಇಲಾಖೆ ಉದ್ದೇಶಿತ ವೈದ್ಯ ಸಿಬ್ಬಂದಿಯನ್ನು ಕಡಿತಗೊಳಿಸಿ ಮತ್ತೊಮ್ಮೆ ಪ್ರಸ್ತಾವ ಕಳಿಸುವಂತೆ ಸೂಚಿಸಿತ್ತು. ಅದರಂತೆ ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ ಅವರು ೨೧೯ ಹುದ್ದೆಗಳಿಗೆ ಬದಲಾಗಿ ೧೮೦ ಹುದ್ದೆಗಳಿಗೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಕಳುಹಿಸಿದ್ದಾರೆ. ಇದಕ್ಕೆ ಹಣಕಾಸು ಇಲಾಖೆ ಅಂಕಿತ ಬಿದ್ದರೆ ಕ್ಯಾನ್ಸರ್ ಆಸ್ಪತ್ರೆ ಶೀಘ್ರದಲ್ಲೇ ರೋಗಿಗಳ ಚಿಕಿತ್ಸೆಗೆ ತೆರೆದುಕೊಳ್ಳಲಿದೆ.
ಹಣಕಾಸು ಇಲಾಖೆ ವೈದ್ಯ-ಸಿಬ್ಬಂದಿ ನೇಮಕಕ್ಕೆ ಅನುಮತಿಸಿದರೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಅನುಕೂಲವಾಗಲಿದೆ. ಮಿಮ್ಸ್ ಆಸ್ಪತ್ರೆಯಲ್ಲಿರುವ ಕೆಲವೊಂದು ಸಿಬ್ಬಂದಿಯನ್ನು ಹೊಂದಾಣಿಕೆ ಮಾಡಿಕೊಂಡು ಕ್ಯಾನ್ಸರ್ ಆಸ್ಪತ್ರೆಯನ್ನು ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಮುನ್ನಡೆಸಬಹುದು ಎಂಬುದು ಅಧಿಕಾರಿಗಳು ಹೇಳುವ ಮಾತು.ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೇಡಿಯೇಷನ್ ಹೊರಹೋಗದಂತೆ ತಡೆಯುವ ಬಂಕರ್ ನಿರ್ಮಾಣ ಕಾಮಗಾರಿ ಇದೀಗ ಅಂತಿಮ ಹಂತದಲ್ಲಿದೆ. ಮಾರ್ಚ್ ಅಂತ್ಯದ ವೇಳೆಗೆ ಬಂಕರ್ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳ್ಳಲಿದೆ. ರೇಡಿಯೇಷನ್ ಯಂತ್ರವನ್ನು ಬಂಕರ್‌ನೊಳಗೆ ಇಡಲಾಗಿದ್ದು, ಸಿವಿಲ್ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಉಳಿದಂತೆ ಎಲೆಕ್ಟ್ರಿಕ್ ಕಾಮಗಾರಿ, ಫ್ಲೋರಿಂಗ್ ಕೆಲಸ ಬಾಕಿ ಇದ್ದು, ಎರಡು ತಿಂಗಳೊಳಗೆ ಪೂರ್ಣಗೊಳ್ಳಲಿರುವುದಾಗಿ ವಿಕಿರಣ ಸುರಕ್ಷತಾ ಅಧಿಕಾರಿ ಅರುಣ್ ಅವರು ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು.
ಕ್ಯಾನ್ಸರ್ ಆಸ್ಪತ್ರೆಯಲ್ಲಿರುವ ಸಿವಿಲ್ ಕಾಮಗಾರಿಗಳೆಲ್ಲವೂ ಮುಕ್ತಾಯಗೊಂಡಿದ್ದು, ಕೆಲವೊಂದು ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ವೈದ್ಯ- ಸಿಬ್ಬಂದಿಗೆ ಅವಕಾಶ ನೀಡಿದರೆ ಹೊರರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಯಾವುದೇ ಅನಾನುಕೂಲವಾಗುವುದಿಲ್ಲ. ಹಣಕಾಸು ಇಲಾಖೆ ಅನುಮೋದನೆ ನೀಡುವುದನ್ನೇ ಎದುರುನೋಡಲಾಗುತ್ತಿದ್ದು. ಅಂತಿಮ ಅಂಕಿತ ಬಿದ್ದರೆ ಕ್ಯಾನ್ಸರ್ ಆಸ್ಪತ್ರೆ ಆರಂಭವಾಗುವ ಕನಸು ನನಸಾಗಲಿದೆ.
೧೬ ಕೋಟಿ ರು. ವೆಚ್ಚದಲ್ಲಿ ಆಧುನೀಕರಣ, ಉಪಕರಣಗಳ ಅಳವಡಿಕೆ
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ₹೧೬ ಕೋಟಿ ವೆಚ್ಚದಲ್ಲಿ ಆಧುನೀಕರಣ ಕಾಮಗಾರಿ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಅಳವಡಿಕೆ ಕಾಮಗಾರಿಗಳು ಚುರುಕಿನಿಂದ ಸಾಗಿವೆ.
ಅರವಳಿಕೆ ವಿಭಾಗಕ್ಕೆ ತುರ್ತು ಅವಶ್ಯಕತೆ ಇರುವ ಆಪರೇಟಿಂಗ್ ಮೈಕ್ರೋಸ್ಕೋಪ್ ಯಂತ್ರ, ಎಂಆರ್‌ಯು ಯೂನಿಟ್ ಉನ್ನತೀಕರಣ, ಅಂಗರಚನಾ ಶಾಸ್ತ್ರ ವಿಭಾಗಕ್ಕೆ ತುರ್ತು ಅವಶ್ಯವಿದ್ದ ಸ್ಕಿಲ್ ಲ್ಯಾಬ್ ಆರಂಭ, ಬೋಧಕ ಆಸ್ಪತ್ರೆ, ವೈದ್ಯ ವಿದ್ಯಾರ್ಥಿಗಳಿಗೆ ಕಾವೇರಿ ನೀರು ಪೂರೈಕೆ, ರೋಗಿಗಳ ಆರೈಕೆಗಾಗಿ ಬಯೋಗ್ಯಾಸ್ ಪ್ಲಾಂಟ್ ಅಳವಡಿಕೆ, ವೈದ್ಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ ನಿರ್ಮಾಣ, ಮಿಮ್ಸ್ ಹೊಸ ಕಟ್ಟಡದ ಐಸಿಯು ಉನ್ನತೀಕರಣ, ವೈದ್ಯ ವಿದ್ಯಾರ್ಥಿಗಳ ವಸತಿಗೃಹಗಳ ಉನ್ನತೀಕರಣ, ಒಳರೋಗಿಗಳಿಗೆ, ವೈದ್ಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಗುಣಮಟ್ಟದ ಆಹಾರ ನೀಡುವುದು, ಕೇಂದ್ರ ಸರ್ಕಾರದ ಅನುದಾನದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ.
‘ಕ್ಯಾನ್ಸರ್ ಆಸ್ಪತ್ರೆಯ ರೇಡಿಯೇಷನ್ ಬಂಕರ್ ನಿರ್ಮಾಣ ಮುಕ್ತಾಯದ ಹಂತದಲ್ಲಿದೆ. ವೈದ್ಯ-ಸಿಬ್ಬಂದಿ ನೇಮಕ ವಿಚಾರ ಹಣಕಾಸು ಇಲಾಖೆ ಮುಂದಿದೆ. ಶೀಘ್ರ ಅನುಮೋದನೆ ನೀಡಿದರೆ ಹೊರರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿದೆ. ₹೧೬ ಕೋಟಿ ವೆಚ್ಚದಲ್ಲಿ ಆಸ್ಪತ್ರೆಯೊಳಗೆ ಆಧುನೀಕರಣ ಕಾಮಗಾರಿ ಹಾಗೂ ವಿವಿಧ ವಿಭಾಗಗಳಿಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುತ್ತಿದ್ದೇವೆ.’