121 ಕೋಟಿ ಬೆಳೆಹಾನಿ ಪರಿಹಾರಕ್ಕೆ ಪ್ರಸ್ತಾವ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Sep 30, 2025, 12:00 AM IST
ಸುದ್ದಿಗೋಷ್ಠಿಯಲ್ಲಿ ಸಚಿವ ಡಾ. ಎಚ್‌.ಕೆ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ 11,348 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಹಾನಿಯಾಗಿದೆ. ಎನ್‌ಡಿಆರ್‌ಎಫ್ ಪ್ರಕಾರ ₹10.36 ಕೋಟಿ ಪರಿಹಾರಕ್ಕಾಗಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಗದಗ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿದ್ದರ ಕುರಿತು ಜಂಟಿ ಸಮೀಕ್ಷೆ ಕಾರ್ಯ ನಡೆಸಲಾಗಿದೆ. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 1,12,438 ಹೆಕ್ಟೇರ್ ಬೆಳೆಹಾನಿಯಾಗಿದೆ. ಎನ್‌ಡಿಆರ್‌ಎಫ್ ಪ್ರಕಾರ ₹121.33 ಕೋಟಿ ಪರಿಹಾರ ನೀಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಎಚ್.ಕೆ. ಪಾಟೀಲ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳೆಹಾನಿ ಸಮೀಕ್ಷೆ ಹಾಗೂ ಜನತಾ ದರ್ಶನ, ಪ್ರಗತಿ ಪರಿಶೀಲನೆ ಸಭೆ ಜರುಗಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ 11,348 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಹಾನಿಯಾಗಿದೆ. ಎನ್‌ಡಿಆರ್‌ಎಫ್ ಪ್ರಕಾರ ₹10.36 ಕೋಟಿ ಪರಿಹಾರಕ್ಕಾಗಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಕೃಷಿ ಬೆಳೆಹಾನಿಗೆ ಸಂಬಂಧಿಸಿದಂತೆ 4337 ರೈತರಿಂದ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಿ ವರದಿಯಲ್ಲಿ ಅಳವಡಿಸಲಾಗುವುದು. ಕೃಷಿಗೆ ಸಂಬಂಧಿಸಿದಂತೆ ₹4.36 ಕೋಟಿ ಹಾಗೂ ತೋಟಗಾರಿಕೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ₹1 ಕೋಟಿ ಪರಿಹಾರ ನೀಡಲು ಪ್ರಸ್ತಾವನೆಯಲ್ಲಿ ಸೇರಿಸಿ ಸಲ್ಲಿಸಲಾಗುವುದು ಎಂದರು.

ಜನತಾ ದರ್ಶನ: ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಮಹಾತ್ವಾಕಾಂಕ್ಷಿ ಜನತಾ ದರ್ಶನ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜರುಗಿಸಲಾಗಿದೆ. ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮ ವಹಿಸಲು ಸೂಚಿಸಲಾಗಿದೆ. ಜನತಾ ದರ್ಶನದಲ್ಲಿ ವಿಲೇವಾರಿಯಾಗದ ಅರ್ಜಿಗಳಲ್ಲಿ ಕೆಲವೊಂದು ಅರ್ಜಿಗಳು ಅನುದಾನದ ಲಭ್ಯತೆ ಇಲ್ಲದೇ ವಿಲೇವಾರಿಯಾಗಿರುವುದಿಲ್ಲ. ಸಂಬಂಧಿತ ಇಲಾಖೆಯ ಅಧಿಕಾರಿಗಳು ಮೇಲಧಿಕಾರಿಗಳೊಂದಿಗೆ ಸಂಪರ್ಕಿಸಿ ಅನುದಾನ ತರಿಸಿಕೊಂಡು ಅರ್ಜಿ ವಿಲೇವಾರಿಗೆ ಕ್ರಮ ವಹಿಸಬೇಕು. ಇನ್ನು ಕೆಲವು ಅರ್ಜಿಗಳ ವಿಲೇವಾರಿಗಾಗಿ ಆಯ್ಕೆ ಸಮಿತಿ ಸಭೆಗಳನ್ನು ಮಾಡಬೇಕು. ಹೀಗೆ ವಿವಿಧ ಹಂತದಲ್ಲಿ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಇಲಾಖೆ ಅಧಿಕಾರಿಗಳು ಅ. 10ನೇ ತಾರೀಕಿನೊಳಗಾಗಿ ವಿಲೇವಾರಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದರು.

ಪ್ರಭುವಿನೆಡೆಗೆ ಪ್ರಭುತ್ವ: ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮದಲ್ಲಿ ಒಟ್ಟು 21 ದೂರು ದಾಖಲಾಗಿವೆ. 13 ದೂರುಗಳಿಗೆ ಸಂಪೂರ್ಣ ಪರಿಹಾರ ಒದಗಿಸಲಾಗಿದೆ. 2 ಮನವಿಗಳು ಯೋಜನೆ ಅಳವಡಿಕೆ ಕುರಿತಂತೆ ಹಾಗೂ 5 ಅರ್ಜಿಗಳು ಬಾಕಿ ಇವೆ. ಬಾಕಿ ಇರುವಂತಹ ದೂರುಗಳ ಕುರಿತು ಶೀಘ್ರ ಕ್ರಮ ವಹಿಸಲು ಸೂಚಿಸಲಾಗಿದೆ.ಅಮಾನತು: ಗದಗ ತಹಸೀಲ್ದಾರರ ಕಚೇರಿಯಲ್ಲಿ ಸಂಧ್ಯಾಸುರಕ್ಷಾ, ವಿಧವಾವೇತನ, ವೃದ್ಧಾಪ್ಯವೇತನ ಕುರಿತಂತೆ ಸಾಮಾಜಿಕ ಭದ್ರತಾ ಯೋಜನೆಗಳಡಿ ಅನರ್ಹರಿಗೆ ಮಂಜೂರಾತಿ ಆರೋಪದಡಿ ಉಪತಹಸೀಲ್ದಾರ್ ಡಿ.ಟಿ. ವಾಲ್ಮೀಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಇಂದು ನಾನೇ ಖುದ್ದಾಗಿ ಕಚೇರಿಗೆ ಹೋಗಿ ಪರಿಶೀಲನೆ ನಡೆಸಲಾಗಿ, ಅನರ್ಹರಿಗೆ ಪಿಂಚಣಿ ಮಂಜೂರು ಮಾಡಿರುವ ಕುರಿತು ಕಂಡುಬಂದ ಹಿನ್ನೆಲೆಯಲ್ಲಿ ಅಮಾನತು ಕ್ರಮ ವಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 17,997 ಅನರ್ಹರಿಗೆ ಪಿಂಚಣಿ ಮಂಜೂರಾತಿ ಆಗಿರುವುದು ತಿಳಿದುಬಂದಿದ್ದು, ಇದರ ಸತ್ಯಾಸತ್ಯತೆಗಾಗಿ ಸಂಪೂರ್ಣ ತನಿಖೆಗೆ ಸೂಚಿಸಲಾಗಿದೆ. ಅನರ್ಹರಿಗೆ ವಿತರಣೆಯಾಗುತ್ತಿರುವ ಪಿಂಚಣಿ ಹಣ ತಕ್ಷಣ ನಿಲ್ಲಿಸಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಸಾಕಷ್ಟು ವಿಚಾರಣೆ ನಡೆಸಿ ಅನರ್ಹರಿಗೆ ಕೊಡುವಂತಹ ಸೌಲಭ್ಯ ನಿಲ್ಲಿಸುವ ಕುರಿತು ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ ಎಂದರು.ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್ ಜಗದೀಶ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಅಕ್ರಮ ಮನೆಗಳ ತೆರವು ಎನ್‌ಐಎ ತನಿಖೆಗೆ ನೀಡಲು ಆಗ್ರಹ
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್