ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಭೆ
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ
ಕನ್ನಡಪ್ರಭ ವಾರ್ತೆ ಕೊಪ್ಪಳಸಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ವಿರುಪಾಪುರಗಡ್ಡಿಯ ಟ್ರೀ ಪಾರ್ಕ್ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ ಹೇಳಿದರು.
ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಕೆಲಸ ಕಾರ್ಯವನ್ನು 2016-17ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದ್ದು, ಈಗಾಗಲೇ ಟ್ರೀ ಪಾರ್ಕ್ ಸುತ್ತಲೂ ಚೈನ್‌ಲಿಂಕ್ ಮೆಸ್ ಫೆನ್ಸಿಂಗ್, ಸ್ವಾಗತ ಗೋಪುರ, ಟಿಕೆಟ್ ಕೌಂಟರ್, ಅರಣ್ಯ ಮಾಹಿತಿ ಕೇಂದ್ರ, ಪಾರಾಮೋಲಾ, ಶೌಚಾಲಯ, ವಾಕಿಂಗ್ ಪಾತ್ ಮತ್ತಿತರ ಕಾಮಗಾರಿಗಳನ್ನು ಈಗಾಗಲೇ ನಿರ್ವಹಿಸಲಾಗಿದೆ. ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಟ್ರೀ ಪಾರ್ಕ್ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಗಂಗಾವತಿ ವಲಯ ಅರಣ್ಯಾಧಿಕಾರಿ ಸುಭಾಸಚಂದ್ರ ನಾಯಕ ಮಾತನಾಡಿ, ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನಕ್ಕೆ ಹೊಂದಿಕೊಂಡಿರುವ ಸಾಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂ. 1 & 13ರಲ್ಲಿರುವ ಸಣಾಪುರ ಕೆರೆಯು ಭಾಗಶಃ ಪ್ರದೇಶವು ಸಾಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶ ಬ್ಲಾಕ್-2 ಗೆ ಸೇರಿದ್ದು, ಸಾಣಾಪುರ ಗ್ರಾಮದಲ್ಲಿನ ಮೀನುಗಾರಿಕೆ ಕುಟುಂಬಗಳು ಸಾಣಾಪುರ ಕೆರೆಯಲ್ಲಿ ಸಾಂಪ್ರದಾಯಿಕವಾಗಿ ಹರಿಗೋಲು ನಾವಿಕರು ಪ್ರವಾಸಿಗರನ್ನು ಕರೆದುಕೊಂಡು ಹರಿಗೋಲಿನಲ್ಲಿ ಸುತ್ತಾಡಿಸಿ ಕೆರೆಯ ಪರಿವೀಕ್ಷಣೆ ಮಾಡಿಸುತ್ತಿದ್ದರು. ಈ ಕುರಿತಾಗಿ ಹರಿಗೋಲು ನಾವಿಕರು ಇನ್ನು ಮುಂದೆಯೂ ಕೂಡ ಈ ಚಟುವಟಿಕೆಯನ್ನು ತಮ್ಮ ಉಪ ಜೀವನಕ್ಕಾಗಿ ಮುಂದುವರೆಸಿಕೊಂಡು ಹೋಗಲು ಅನುಕೂಲ ಮಾಡಿಕೊಡಬೇಕೆಂದು ವಲಯ ಅರಣ್ಯ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನದ ಎಲ್ಲ ಕಾರ್ಯಚಟುವಟಿಕೆಗಳ ವ್ಯಾಪ್ತಿಗೆ ಸಾಣಾಪುರ ಕೆರೆಯನ್ನೂ ಸೇರ್ಪಡೆಗೊಳಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಸ್ಥಳೀಯ ಹರಿಗೋಲು ಚಾಲಕರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಹಿತದೃಷ್ಟಿಯಿಂದ ನಿಯಮಾನುಸಾರ ಕೊರೆಕಲ್ ರೈಡ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹರಿಗೋಲು ಚಾಲನೆಗೆ ಸ್ಥಳೀಯರಿಗೆ ಆದ್ಯತೆ, ಪ್ರವಾಸಿಗರಿಗಾಗಿ ಕೆರೆ ಆವರಣದಲ್ಲಿ ಕ್ಯಾಂಟೀನ್, ವಾಹನ ನಿಲುಗಡೆಗಾಗಿ ಪಾರ್ಕಿಂಗ್ ವ್ಯವಸ್ಥೆ ಮತ್ತು ನಿರ್ವಹಣೆ ಹಾಗೂ ಇತರ ಚಟುವಟಿಕೆಗಳನ್ನು ಟೆಂಡರ್ ಮೂಲಕ ನಿರ್ವಹಿಸಲಾಗುವುದು ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ವಿರುಪಾಪುರಗಡ್ಡಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ಸಮಿತಿಯನ್ನು ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಯಿತು.