ಭಟ್ಕಳದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಚಿಂತನೆ: ಮಂಕಾಳ ವೈದ್ಯ

KannadaprabhaNewsNetwork |  
Published : Nov 29, 2026, 02:30 AM IST
ಪೊಟೋ ಪೈಲ್ : 28ಬಿಕೆಲ್1,2 | Kannada Prabha

ಸಾರಾಂಶ

ಸಂಘಟಕರು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಲು ಹಿಂಜರಿಯಬಾರದು. ಭಟ್ಕಳದಲ್ಲಿ ಕ್ರೀಡೆಗೆ ನೆರವು ನೀಡಲು ಸಿದ್ಧರಿರುವ ದಾನಿಗಳು ಹಾಗೂ ಸಂಘ- ಸಂಸ್ಥೆಗಳಿದ್ದು, ಎಲ್ಲರೂ ಒಗ್ಗೂಡಿ ಕ್ರೀಡೆಯ ಬೆಳವಣಿಗೆಗೆ ಕೈಜೋಡಿಸಬೇಕು.

ಭಟ್ಕಳ: ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ತಾಲೂಕಿನಲ್ಲಿ 15 ಎಕರೆ ಜಾಗ ಗುರುತಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಡೆಪ್ಯುಟಿ ಸ್ಪೀಕರ್ ಮಂಕಾಳ ಎಸ್. ವೈದ್ಯ ಹೇಳಿದರು.

ಪಟ್ಟಣದ ಕೆಪಿ ಮೈದಾನದಲ್ಲಿ ರಾಜ್ಯಮಟ್ಟದ ಗಂಡಭೇರುಂಡ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟಕರು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಲು ಹಿಂಜರಿಯಬಾರದು. ಭಟ್ಕಳದಲ್ಲಿ ಕ್ರೀಡೆಗೆ ನೆರವು ನೀಡಲು ಸಿದ್ಧರಿರುವ ದಾನಿಗಳು ಹಾಗೂ ಸಂಘ- ಸಂಸ್ಥೆಗಳಿದ್ದು, ಎಲ್ಲರೂ ಒಗ್ಗೂಡಿ ಕ್ರೀಡೆಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದರು.

ಜಾಲಿಯಲ್ಲಿರುವ ಕ್ರೀಡಾಂಗಣದ ಜಾಗದಲ್ಲಿ ಪ್ರೌಢಶಾಲೆ ನಿರ್ಮಾಣವಾಗಿರುವುದರಿಂದ ಕ್ರೀಡಾಂಗಣಕ್ಕೆ ಪ್ರತ್ಯೇಕ ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದೆ. ಸುಮಾರು 15 ಎಕರೆ ಜಾಗ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಭಟ್ಕಳದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಚಿಂತನೆ ಇದೆ. ಕಬಡ್ಡಿ ಮಾತ್ರವಲ್ಲದೆ ವಿವಿಧ ಕ್ರೀಡೆಗಳಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದರು.

ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್ ನಾಯ್ಕ ಮಾತನಾಡಿ, ಆಳ್ವಾಸ್ ಹಾಗೂ ಕೆಎಲ್‌ಇ ವಿಶ್ವವಿದ್ಯಾಲಯದ ಕ್ರೀಡಾಕೂಟಗಳಲ್ಲಿ ಭಟ್ಕಳದ ಮೂವರು ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಆದರೆ ಸಾಧನೆ ಮಾಡಿದ ಈ ಕ್ರೀಡಾಪಟುಗಳಿಗೆ ಈವರೆಗೆ ಉದ್ಯೋಗಾವಕಾಶ ದೊರೆತಿಲ್ಲ. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಮೂವರಿಗೂ ಉದ್ಯೋಗ ಕಲ್ಪಿಸಿ, ಅವರ ಸಾಧನೆಗೆ ಸೂಕ್ತ ಗೌರವ ನೀಡಬೇಕು ಎಂದು ಶಾಸಕ ಮಂಕಾಳ ವೈದ್ಯ ಅವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘಟಕರ ವತಿಯಿಂದ ಡೆಪ್ಯುಟಿ ಸ್ಪೀಕರ್ ಮಂಕಾಳ ಎಸ್. ವೈದ್ಯ ಸೇರಿದಂತೆ ಗಣ್ಯರನ್ನು ಸನ್ಮಾನಿಸಲಾಯಿತು. ಇವೆಂಟ್ ಸ್ಪೋರ್ಟ್ಸ್ ಕಾರ್ಪೊರೇಷನ್ ಮುಖ್ಯಸ್ಥ ವಿಕಾಸ್ ಕೆ. ಗೌತಮ್, ಬಿ.ಸಿ. ರಮೇಶ್, ಮಾಜಿ ಕಬಡ್ಡಿ ಆಟಗಾರ ಬಿ.ಸಿ. ಸುರೇಶ್, ಪಂದ್ಯಾವಳಿ ಸಮಿತಿ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಚಲುವರಾಜ್, ಎಂ. ಷಣ್ಮುಗಂ, ಮುನಿರಾಜು, ಡಿಎಫ್‌ಒ ಯೋಗೇಶ್ ಸಿ.ಕೆ., ಮೌಲಾನ ಅಜೀಜುರ್ ರೆಹಮಾನ್ ಸಾಹೇಬ್, ಇಮ್ರಾನ್ ಲಂಕಾ, ಜಾಫರ್ ಹೈದರ್ ಮತ್ತಿತರರು ಉಪಸ್ಥಿತರಿದ್ದರು.ಭಟ್ಕಳದಲ್ಲೂ ಪ್ರೊ ಕಬಡ್ಡಿ ಆಯೋಜನೆಗೆ ಚಿಂತನೆ: ಬಿ.ಸಿ. ರಮೇಶ್

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಗೂ ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ಮಾತನಾಡಿ, ಭಟ್ಕಳದ ಜನರ ಕ್ರೀಡಾಭಿಮಾನ ಹಾಗೂ ಆಟಗಾರರಿಗೆ ನೀಡುವ ಪ್ರೋತ್ಸಾಹ ಮೆಚ್ಚುವಂತಹದ್ದು. ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಆಯೋಜಿಸುವಂತೆ ಭಟ್ಕಳದಲ್ಲಿಯೂ ಒಂದು ದಿನ ಪಂದ್ಯಾವಳಿ ಆಯೋಜಿಸಬೇಕು ಎನ್ನುವುದು ಬಹುದಿನದ ಆಶಯವಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕ್ಕರೆ ಕನಿಷ್ಠ ಮಾರಾಟ ಬೆಲೆ ಕೆ.ಜಿ.ಗೆ ₹60ಕ್ಕೆ ಹೆಚ್ಚಿಸಿ
ಸೈನಿಕ ಶಾಲೆ ಪ್ರವೇಶಾತಿಗೆ ಜ.31ರಂದು ಪರೀಕ್ಷೆ