ಮೂರು ತಾಲೂಕುಗಳ ಎಸಿ ಕಚೇರಿ ಆರಂಭಕ್ಕೆ ಪ್ರಸ್ತಾವ

KannadaprabhaNewsNetwork |  
Published : Jun 10, 2025, 08:38 AM IST
ಮನಗೂಳಿ ಸಭೆ | Kannada Prabha

ಸಾರಾಂಶ

Proposal, open, AC, offices, three, taluks, ಮೂರು, ತಾಲೂಕುಗಳ, ಎಸಿ, ಕಚೇರಿ, ಆರಂಭ, ಪ್ರಸ್ತಾವ

ಕನ್ನಡಪ್ರಭ ವಾರ್ತೆ ಸಿಂದಗಿ

ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಗೆ ಇಲಾಖೆಯ ಪ್ರಗತಿಯ ಪೂರ್ಣ ಮಾಹಿತಿಯೊಂದಿಗೆ ಬರಬೇಕು. ಇಲ್ಲಿ ಬಂದು ಮೊಬೈಲ್‌ನಲ್ಲಿ ಫೋಟೋಗಳನ್ನು ತೋರಿಸಿದರೆ ಮನ್ನಣೆ ನೀಡುವುದಿಲ್ಲ ಎಂದು ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ಮೂರು ತಾಲೂಕುಗಳನ್ನೊಳಗೊಂಡ ಉಪ-ವಿಭಾಗಾಧಿಕಾರಿ ಕಚೇರಿ ಮಂಜೂರು, ವಿದ್ಯುತ್ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ, ಆಲಮೇಲ ಪಟ್ಟಣದಲ್ಲಿ ವಿದ್ಯುತ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ, ಸಿಂದಗಿ ನಗರದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ನಿರ್ಮಾಣ, ನೂತನ ಆಲಮೇಲ ತಾಲೂಕಿಗೆ ಹೋಬಳಿಗಳ ಘೋಷಣೆ, ಸಿಂದಗಿ ಕ್ಷೇತ್ರದಲ್ಲಿ ಮಂಜೂರಾತಿಗೆ ಇದ್ದ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 9 ಚಾಲ್ತಿ ಇದ್ದು, ಉಳಿದ 5 ಪ್ರಾಥಮಿಕ ಕೇಂದ್ರ ಪ್ರಾರಂಭಿಸವುದು. ಆಲಮೇಲ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆರಿಸಿ 50 ಹಾಸಿಗೆಯುಳ್ಳ ತಾಲೂಕಾ ಆಸ್ಪತ್ರೆಯನ್ನಾಗಿಸವುದು. ಸಿಂದಗಿ ಮತ್ತು ಆಲಮೇಲ ನೂತನ ತಾಪಂ ಕಟ್ಟಡ ಸೇರಿ ಮುಂತಾದ ಪ್ರಸ್ತಾವನೆಗಳನ್ನು ಸಲ್ಲಿಸಲು ತ್ರೈಮಾಸಿಕ ಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಅಂಗೀಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.ಬಳಿಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಮಾಹಿತಿ ನೀಡಿದರು. ಆಗ ಶಾಸಕರು ಎಲ್ಲದಕ್ಕೂ ಹಾರಿಕೆ ಉತ್ತರ ನೀಡುತ್ತೀರಿ. ಬಾಲ್ಯ ವಿವಾಹಗಳನ್ನು ತಡೆಗಟ್ಟಲು ತಾಲೂಕಾದ್ಯಂತ ಜಾಗೃತಿ ಕಾರ್ಯಕ್ರಮ ಮಾಡಿಲ್ಲ. ಬಾಲ್ಯ ವಿವಾಹವಾದ ಬಾಲಕಿ ತಂದೆ ಆತ್ಮಹತ್ಯೆ ಮಾಡಿಕೊಂಡ. ಆ ಕುಟುಂಬಕ್ಕೆ ಮಾನವೀಯ ನೆಲೆಗಟ್ಟಿನ ಮೇಲೆ ಕನಿಷ್ಠ ಸಾಂತ್ವನ ಹೇಳಲು ಹೋಗದ ನೀವು ಎಂತಹ ಅಧಿಕಾರಿ. ಮುಂದೆ ಇಂತಹದೇ ಅಸಡ್ಯತನ ತೋರದೆ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ತರಾಟೆಗೆ ತೆಗೆದುಕೊಂಡರು.ಈಗಾಗಲೇ ಮುಂಗಾರು ಬಿತ್ತನೆ ಪ್ರಾರಂಭವಾಗಿದ್ದು, 33 ವರ್ಷಗಳ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗಿದೆ. ರೈತರ ಮೊಗದಲ್ಲಿ ಕಳೆ ಬಂದಿದೆ. ಆದರೆ ಕೃಷಿ ಇಲಾಖೆ ಬಿತ್ತನೆ ಪೂರ್ವದಲ್ಲಿ ರೈತರಿಗೆ ಬೀಜ ಗೊಬ್ಬರಗಳ ಸೂಕ್ತ ಮಾಹಿತಿ ನೀಡದಿರುವುದು ಬೇಜವಾಬ್ದಾರಿತನ. ತಾಲೂಕಾ ಮಟ್ಟದಲ್ಲಿ ಸಭೆ ಆಯೋಜಿಸಿ ಮಾಹಿತಿ ನೀಡಬಹುದಾಗಿತ್ತು ಎಂದ ಶಾಸಕರ ಪ್ರಶ್ನೆಗೆ ಉತ್ತರಿಸಿದ ಕೃಷಿ ಅಧಿಕಾರಿ ಎಚ್.ವೈ.ಸಿಂಗೆಗೋಳ, ಮುಂದೆ ಇಂತಹ ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದ ಅಧಿಕಾರಿಗ ವಿರುದ್ಧ ಗರಂ ಆದರು.ಜಿಪಂ ಜೆಇ ಆರತಿ ಅಲ್ಲಿಬಾದಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕಳೆದ ಒಂದು ವರ್ಷದಿಂದ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ನಿಮಗೆ ಸೂಚನೆ ನೀಡುತ್ತಿದ್ದೇನೆ, ಸ್ಪಂದಿಸುತ್ತಿಲ್ಲ. ಹೆಣ್ಣು ಮಗಳನ್ನು ಸಭೆಯಲ್ಲಿ ಎದ್ದು ನಿಲ್ಲಿಸಿ ಮಾತನಾಡುವುದು ಸರಿಯಲ್ಲ. ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ವರ್ಗಾವಣೆಯಾಗಿ ಹೋಗಿಬಿಡಿ ಎಂದು ಖಡಕ್‌ ಸೂಚನೆ ನೀಡಿದರು. ಈ ವೇಳೆ ಜಿಲ್ಲಾ ಯೋಜನಾಧಿಕಾರಿ ನಿಂಗಣ್ಣ ಗೋಟೆ, ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ, ತಾಪಂ ಇಒ ರಾಮು ಅಗ್ನಿ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಶಿವಣ್ಣ ಕೀಟರಗಸ್ತಿ ಸೇರಿ ತಾಪಂ ಸಿಬ್ಬಂದಿಗಳು, ಕೆಡಿಪಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಸಭೆಯಲ್ಲಿ ತಾರಾನಾಥಗೆ ತರಾಟೆ

ನೀರು ಮತ್ತು ನೈರ್ಮಲ್ಯ ಇಲಾಖೆಯ ತಾರಾನಾಥ ರಾಠೋಡರನ್ನು ಜಲ್ ಜೀವನ್ ಮೀಷನ್ ಯೋಜನೆಯ ಕಾಮಗಾರಿ ಪೂರ್ಣಗೊಂಡ ನಾಲ್ಕು ಗ್ರಾಮಗಳ ಹೆಸರು ಹೇಳುವಂತೆ ಹೇಳಿದರು. ಆಗ ಅಸಮರ್ಪಕ ಉತ್ತರ ನೀಡಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯ ಮತ್ತು ಕೇಂದ್ರ ಸರಕಾರ ಪ್ರತಿ ಗ್ರಾಮಕ್ಕೆ ₹ 2 ಕೋಟಿ ವೆಚ್ಚ ಮಾಡಿದೆ. ನೀವು ಮಾಡಿದ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ಕೆಲವೊಂದು ಕಡೆ ನಿರ್ಮಾಣ ಹಂತದಲ್ಲಿಯೇ ಶಿಥಿಲಾವಸ್ಥೆ ತಲುಪಿವೆ. ನೆಪ ಹೇಳುವುದು ಹಾರಿಕೆ ಉತ್ತರ ನೀಡುವುದನ್ನು ಬಿಟ್ಟು ಗುಣಮಟ್ಟದ ಕಾಮಗಾರಿ ಮಾಡುವಂತೆ ಎಚ್ಚರಿಕೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಎಸ್‌ಎಸ್‌ಎಲ್‌ಸಿ ಫಲಿತಾಂಶಗಳ ಕುಸಿತಕ್ಕೆ ಕಾರಣವೆನೆಂದು ಪ್ರಶ್ನಿಸಿದ ಶಾಸಕರು ಜೂ.14ರಂದು ಅನುದಾನಿತ ಮತ್ತು ಸರ್ಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ತಾಪಂ ಆವರಣದಲ್ಲಿ ಸಭೆ ಕರೆಯುವಂತೆ ಶಾಸಕ ಅಶೋಕ ಮನಗೂಳಿ ಸೂಚಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ