ರಾಮನಗರ: ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಹೆಚ್ಚು ಚೆಕ್ ಡ್ಯಾಂಗಳ ನಿರ್ಮಾಣ ಹಾಗೂ ತುಂತುರು ಹನಿ ನೀರಾವರಿ ಸಲಕರಣೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸುವಂತೆ ಬೇಡಿಕೆ ಬಂದಿದೆ. ಇದರ ಸಾಧಕ - ಭಾದಕಗಳ ವರದಿಯನ್ನು ಕೇಂದ್ರ ಸರ್ಕಾರದ ಜಲ ಶಕ್ತಿ ಸಚಿವಾಲಯಕ್ಕೆ ಸಲ್ಲಿಸುವುದಾಗಿ ಕೇಂದ್ರ ಜಲ ಸಂಪನ್ಮೂಲ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾತ್ ಭಾಯ್ ಸವಾಭಾಯ್ ಪಟೇಲ್ ಹೇಳಿದರು.
ನಗರದ ಜಿಪಂ ಭವನದಲ್ಲಿ ನಡೆದ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಅಟಲ್ ಭೂಜಲ ಯೋಜನೆ ಪ್ರಗತಿಯ ಬಗ್ಗೆ ಸಂಸದರನ್ನೊಳಗೊಂಡ ಜಲಶಕ್ತಿ ಸಚಿವಾಲಯದ ನಿಯೋಗ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದ 14 ಜಿಲ್ಲೆಗಳ 1199 ಗ್ರಾಪಂಗಳಲ್ಲಿ ಅಟಲ್ ಭೂಜಲ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಅಂತರ್ಜಲದ ನಿರ್ವಹಣೆ ಸುಧಾರಣೆ ಹಾಗೂ ನೀರಿನ ಮಿತ ಬಳಕೆ, ಸಂರಕ್ಷಣೆ ಹಾಗೂ ಸಮುದಾಯದ ನಡವಳಿಕೆಯಲ್ಲಿ ಸ್ವಯಂ ಪ್ರೇರಿತರಾಗಿ ಕಾರ್ಯನಿರ್ವಹಿಸುವಂತೆ ಆಯ್ದ ಗ್ರಾಮ ಪಂಚಾಯತಿಗಳಲ್ಲಿ ನಿರ್ವಹಣಾ ಸಮಿತಿ ಸದಸ್ಯರು ಆಸಕ್ತಿ ವಹಿಸಿ ಯೋಜನೆ ಯಶಸ್ವಿಗೆ ಶ್ರಮಿಸಿದ್ದಾರೆ. ಅಲ್ಲದೆ ಚೆಕ್ ಡ್ಯಾಂಗಳು ಹಾಗೂ ಹನಿ ನೀರಾವರಿ ಸಲಕರಣೆಗಳನ್ನು ಹೆಚ್ಚಾಗಿ ವಿತರಿಸುವಂತೆ ಚುನಾಯಿತ ಪ್ರತಿನಿಧಿಗಳು ಗಮನ ಸೆಳೆದಿದ್ದಾರೆ ಎಂದರು.ಅಟಲ್ ಭೂಜಲ ಯೋಜನೆಯು ಸಮುದಾಯ ಸಹಭಾಗಿತ್ವದಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣಾ ಪದ್ದತಿಗಳ ಮೂಲಕ ಅಂತರ್ಜಲದ ತೀವ್ರ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಕೈಗೊಂಡಿರುವ ಕೆಲಸಗಳು ನಮಗೆ ತೃಪ್ತಿಯಿದೆ. ಅಲ್ಲದೆ ಅಂತರ್ಜಲ ಸದ್ಬಳಕೆ ಹಾಗೂ ಪುನಶ್ಛೇತನಕ್ಕೆ ಕ್ರಮ ವಹಿಸಿರುವುದು ಕಂಡು ಬಂದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ಶ್ರಮ ವಹಿಸಿ ಅಟಲ್ ಭೂಜಲ ಯೋಜನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಪ್ರಶಂಸಿಸಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಸಮಿತಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಳೆದ 6 ದಿನಗಳಿಂದ ಪ್ರವಾಸ ಕೈಗೊಂಡಿದ್ದು ಮೈಸೂರು ಜಿಲ್ಲೆ ಪ್ರವಾಸ ಮುಗಿಸಿ ರಾಮನಗರ ಜಿಲ್ಲೆಗೆ ಆಗಮಿಸಿದೆ. ಈ ಯೋಜನೆಯು ಐದು ವರ್ಷಗಳ ಅವಧಿಯಲ್ಲಿ ಪ್ರಗತಿಪರ ರೈತರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸಹಭಾಗಿತ್ವದಲ್ಲಿ ಅಂತರ್ಜಲ ವೃದ್ದಿಸಲು ಕ್ರಮ ವಹಿಸಿದೆ. ಹಾಗೆಯೇ ಮೇಲ್ವಿಚಾರಣೆಯನ್ನು ಮಾಡುತ್ತಿದೆ ಎಂದರು.ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರು ರೇಷ್ಮೆಹಾರ ಹಾಕಿ, ಮೈಸೂರು ಪೇಟ ತೊಡಿಸಿ ಆತ್ಮೀಯವಾಗಿ ಅಭಿನಂದಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಸಮಿತಿ ಸದಸ್ಯರಾದ ಹಸ್ಮುಖಭಾಯ್ ಸೋಮಾಭಾಯ್ ಪಟೇಲ್, ವಿಜಯ್ ಬಗೀಲ್, ಅನಿಲ್ ಪ್ರಸಾದ್ ಹೆಗ್ಡೆ, ಸುನಿಲ್ ಕುಮಾರ್, ಕುರುವ ಗೊರಂಟ್ಲ ಮಾಧವ, ರವೀಂದ್ರ ನಾಥ್, ಲೋಕಸಭಾ ಕಾರ್ಯದರ್ಶಿ ಅಜಯ್ ಕುಮಾರ್ ಸೂರದ್, ಸಿಜಿಡಬ್ಲುಬಿ ಅಧ್ಯಕ್ಷ ಡಾ.ಸುನೀಲ್ ಕುಮಾರ್ , ಎಂಒಜೆಎಸ್ ಜಂಟಿ ಕಾರ್ಯದರ್ಶಿ ಸುಭೋದ್ ಯಾದನ್ , ಎನ್ ಪಿಎಂಯುನ ಯೋಜನಾ ನಿರ್ದೇಶಕ ಪ್ರತುಲ್ ಸೆಕ್ಸೆನಾ, ಸಿಜಿಡ್ಲ್ಯುಬಿನ ಎನ್ .ಜ್ಯೋತಿಕುಮಾರ್, ಲಕ್ಷ್ಮೀ ಪುರ ಗ್ರಾಪಂ ಸದಸ್ಯೆ ಸರಿತಾ, ಜಾಲಮಂಗಲ ಗ್ರಾಪಂ ಸದಸ್ಯ ನಾಗರಾಜು ಉಪಸ್ಥಿತರಿದ್ದರು.12ಕೆಆರ್ ಎಂಎನ್ 4.ಜೆಪಿಜಿರಾಮನಗರದ ಜಿಪಂ ಭವನದಲ್ಲಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಅಟಲ್ ಭೂಜಲ ಯೋಜನೆ ಪ್ರಗತಿಯ ಬಗ್ಗೆ ಸಂಸದರನ್ನೊಳಗೊಂಡ ಜಲಶಕ್ತಿ ಸಚಿವಾಲಯದ ನಿಯೋಗ ಸಂವಾದ ನಡೆಸಿತು.