ಅಳಿವಿನಂಚಿನಲ್ಲಿರುವ ಜೀವವೈವಿಧ್ಯ ರಕ್ಷಿಸಿ: ಅಶೀಸರ

KannadaprabhaNewsNetwork |  
Published : Sep 05, 2024, 12:34 AM ISTUpdated : Sep 05, 2024, 12:35 AM IST
ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಪಂ ಆವಾರದಲ್ಲಿ ಸ್ಥಳ ಭೇಟಿ ಜಾಥಾಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಆಯುರ್ವೇದದಲ್ಲಿ ಅತ್ಯಂತ ಉಪಯುಕ್ತವಾದ ರಾಜ್ಯದಲ್ಲೇ ಅಪರೂಪವಾದ ಮರದರಿಶಿಣ ಬಳ್ಳಿಯ ಪ್ರಭೇದ ಉಳಿಸುವತ್ತ ಯೋಜನೆ ರೂಪಿಸಬೇಕು.

ಯಲ್ಲಾಪುರ: ತಾಲೂಕು ಜೀವ ವೈವಿಧ್ಯ ನಿರ್ವಹಣಾ ಸಮಿತಿಯಿಂದ ಮಾನ್ಯತೆ ನೀಡಿ ಗುರುತಿಸಲಾದ ನೈಸರ್ಗಿಕ ಜೀವವೈವಿಧ್ಯ ಪಾರಂಪರಿಕ ತಾಣಗಳಿಗೆ ಸಮಿತಿ ತಂಡ ಭೇಟಿ ನೀಡಿತು.

ಹುತ್ಕಂಡದ ಸೀತಾ ಅಶೋಕವನ, ಸಹಸ್ರಳ್ಳಿಯ ಮುಂಡಿಗೆಕೆರೆ, ಕರಿಯವ್ವನಗುಂಡಿಯ ಪಾರಂಪರಿಕ ಬೀಟೆ ವೃಕ್ಷ ಹಾಗೂ ರಾಜ್ಯದಲ್ಲೇ ಅಪರೂಪ ಮತ್ತು ವಿಶಿಷ್ಟವಾದ ಅಳಿವನಂಚಿನಲ್ಲಿರುವ ದೇಹಳ್ಳಿ ಕಾಡಿನ ಮರದರಶಿಣ ಬಳ್ಳಿಯ ಪ್ರದೇಶಗಳಿಗೆ ತಂಡದ ಸದಸ್ಯರು ಮಂಗಳವಾರ ಭೇಟಿ ನೀಡಿ, ಸ್ಥಳದಲ್ಲಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಅವುಗಳ ವಿಶೇಷತೆ, ಉಪಯೋಗ, ಸಂರಕ್ಷಣೆಗಳ ಕುರಿತಂತೆ ಯೋಜನೆ ರೂಪಿಸಿ, ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಲಾಯಿತು.

ಚಂದಗುಳಿ ಗ್ರಾಪಂ ಆವಾರದಲ್ಲಿ ಬೆಳಗ್ಗೆ ಸ್ಥಳ ಭೇಟಿ ಜಾಥಾಕ್ಕೆ ಚಾಲನೆ ನೀಡಿದ ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಎಷ್ಟೋ ಸಸ್ಯ ಪ್ರಭೇದಗಳು ಅಳಿವಿನಂಚಿನಲ್ಲಿದ್ದು, ಅವುಗಳ ಉಳಿವಿಗೆ ಪ್ರಯತ್ನಿಸಿ ಕ್ರಮ ಕೈಗೊಳ್ಳಬೇಕಿದೆ. ಆಯುರ್ವೇದದಲ್ಲಿ ಅತ್ಯಂತ ಉಪಯುಕ್ತವಾದ ರಾಜ್ಯದಲ್ಲೇ ಅಪರೂಪವಾದ ಮರದರಿಶಿಣ ಬಳ್ಳಿಯ ಪ್ರಭೇದ ಉಳಿಸುವತ್ತ ಯೋಜನೆ ರೂಪಿಸಬೇಕು.

ಈಗಾಗಲೇ ಕೈಗಾ ನರೇಂದ್ರ ತಂತಿಮಾರ್ಗ ಸಂಬಂಧ ಒಂದಷ್ಟು ನಾಶವಾಗಿದೆ. ಇರುವುದನ್ನು ಉಳಿಸಿ, ಬೆಳೆಸಲು ಮತ್ತು ಬಾಹ್ಯ ಕಳ್ಳಸಾಗಣೆ ತಡೆಯಲು ಅರಣ್ಯ ಇಲಾಖೆ, ಗ್ರಾಪಂ ಮತ್ತು ಸಮಿತಿ, ಜನಪ್ರತಿನಿಧಿಗಳು ನಿಗಾ ವಹಿಸುವಂತಾಗಬೇಕು ಎಂದರು.

ಡಿಸಿಎಫ್ ಹರ್ಷಭಾನು ಮಾತನಾಡಿ, ಜೀವವೈವಿಧ್ಯ ಸಮಿತಿಯ ಕಾರ್ಯದಲ್ಲಿ ಉಳಿದವರು ಭಾಗಿಯಾಗಬೇಕು. ಜೀವವೈವಿಧ್ಯ ಸಂಕುಲವನ್ನು ಉಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು.

ಸೀತಾ ಅಶೋಕವನ, ಅಶೋಕ ವೃಕ್ಷ, ಮರದರಶಿಣ ಬಳ್ಳಿ ಇದರ ಮಹತ್ವದ ಮತ್ತು ವಿಶೇಷತೆ ಬಗ್ಗೆ ಚರ್ಚಿಸಲಾಯಿತು. ಸಹಸ್ರಳ್ಳಿ ಕೆರೆ ಒತ್ತುವರಿಯಾಗುತ್ತಿರುವ ಬಗ್ಗೆ ಸ್ಥಾನಿಕರೊಬ್ಬರ ದೂರಿದರು. ಒತ್ತುವರಿ ತಡೆಯುವ ಬಗ್ಗೆ, ಕೆರೆ ಸಂರಕ್ಷಣೆ ಮಾಡಿ ಮತ್ತು ಅಲ್ಲಿಗೆ ಬರುವ ಅಪರೂಪದ ಪಕ್ಷಿಸಂಕುಲಗಳ ಸಂರಕ್ಷಣೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

ತಾಲೂಕು ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ನರಸಿಂಹ ಸಾತೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದರಿ ಜೀವ ವೈವಿಧ್ಯ ಸಮಿತಿಯ ಚಟುವಟಿಕೆ ಬಗ್ಗೆ ತಿಳಿಸಿ ರಾಜ್ಯದಲ್ಲೇ ಗಮನ ಸೆಳೆಯುವ ಸ್ಥಳ ಭೇಟಿಯ ವಿಶೇಷತೆ- ಹಿನ್ನೆಲೆಗಳನ್ನು ವಿವರಿಸಿದರು.

ಈ ನಾಲ್ಕು ಜೀವ ವೈವಿಧ್ಯ ತಾಣಗಳಿಗೆ ಭೇಟಿಯ ವೇಳೆ ಸಮಿತಿಯ ಸದಸ್ಯರಾದ ಟಿ.ಆರ್. ಹೆಗಡೆ ತೊಂಡೆಕೆರೆ, ಕೆ.ಎಸ್. ಭಟ್ಟ ಆನಗೋಡ, ಚಂದಗುಳಿ ಗ್ರಾಪಂ ಅಧ್ಯಕ್ಷೆ ಶಿಲ್ಪಾ ರವಿ ನಾಯ್ಕ, ಸದಸ್ಯರಾದ ಆರ್.ಎಸ್. ಭಟ್ಟ, ನೇತ್ರಾವತಿ ಹೆಗಡೆ, ಮದನೂರು ಗ್ರಾಪಂ ಅಧ್ಯಕ್ಷ ರಾಜೇಶ ತಿನೇಕರ್, ಸದಸ್ಯ ಶಹಪೂರಕರ್, ದೇಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಪತಿ ಮುದ್ದೆಪಾಲ್, ಉಪಾಧ್ಯಕ್ಷ ಮಂಜುನಾಥ ಗುಮ್ಮಾನಿ, ಸದಸ್ಯರು, ಎಸಿಎಫ್ ಹಿಮವತಿ ಭಟ್ಟ, ತಾಪಂ ಕಾರ್ಯನಿರ್ವಾಹಣಾಧಿಕಾರಿ ರಾಜೇಶ ಧನವಾಡಕರ್, ಯಲ್ಲಾಪುರ ವಲಯಾರಣ್ಯಾಧಿಕಾರಿ ನರೇಶ ಜಿ.ವಿ., ಡಿಆರ್‌ಎಫ್‌ಒಗಳಾದ ಅಶೋಕ ಹಳ್ಳಿ, ಪ್ರಭಾಕರ, ಅಲ್ತಾಫ್‌, ಶಿವಾನಂದ ಕಾರಟ್ಟಿ, ಪಿಡಿಒಗಳಾದ ರಾಜೇಶ ಶೇಟ್ ಚಂದಗುಳಿ, ನಸ್ರೀನಾ ಎಕ್ಕುಂಡಿ, ದೇಹಳ್ಳಿ, ನಾರಾಯಣ ಗೌಡ ಆನಗೋಡ, ಕಾರ್ಯದರ್ಶಿ ತುಕಾರಾಮ ನಾಯ್ಕ, ಬಿಷ್ಣಪ್ಪ ಚಲವಾದಿ ಮದನೂರು, ತಾಪಂ ಯೋಜನಾಧಿಕಾರಿ ರಾಘವ, ವಿಷಯ ನಿರ್ವಾಹಕಿ ಮಮತಾ ಗೌಡ, ಕೃಷಿ ಇಲಾಖೆಯ ಎಂ.ಜಿ. ಭಟ್ಟ, ಜೇನು ತಜ್ಞ ರಾಮಾ ಮರಾಠಿ ಪಾಲ್ಗೊಂಡಿದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ