ಕನ್ನಡಪ್ರಭ ವಾರ್ತೆ ಹಿರಿಯೂರು
ರೈತರು ವಿವಿಧ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ ಹೇಳಿದರು.ನಗರದ ತ್ರಿಶೂಲ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ.ವಾಸುದೇವ ಮೇಟಿ ಬಣದಿಂದ ಹಮ್ಮಿಕೊಂಡಿದ್ದ ಜನ ಜಾಗೃತಿ ಹಾಗೂ ರೈತರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾದ ದರ ಸಿಗುತ್ತಿಲ್ಲ. ಅನ್ನದಾತನ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಮೂಲಕ ಸರ್ಕಾರ ರೈತರ ಹಿತ ಕಾಯುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ತಾನು ಬೆಳೆದ ಬೆಳೆಗಳಿಗೆ ಬೆಲೆ ಸಿಗಲಿಲ್ಲವೆಂದು ರೈತರು ಮನನೊಂದು ಆತ್ಮಹತ್ಯೆಯ ಹಾದಿ ಹಿಡಿಯುವಂತಾಗುತ್ತದೆ. ಹಾಗಾಗಿ ಸರ್ಕಾರ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಘೋಷಿಸಬೇಕು.ರೈತರು ನೀರನ್ನು ಮಿತವಾಗಿ ಬಳಸಬೇಕು. ಹೊಲಗಳಲ್ಲಿ ಹರಿದು ಹೋಗುವ ನೀರನ್ನು ತಾವೇ ತಡೆದಿಟ್ಟುಕೊಳ್ಳಬೇಕು. ಇದರಿಂದ ಅಂತರ್ಜಲ ಮಟ್ಟ ವೃದ್ಧಿಗೆ ಸಹಕಾರಿಯಾಗಲಿದೆ. ಹರಿಯುವ ನೀರನ್ನು ನಿಲ್ಲಿಸಿ ನಿಂತ ನೀರನ್ನ ಹಿಂಗಿಸಿಕೊಂಡಾಗ ಕೊಳವೆ ಬಾವಿ, ಕೃಷಿ ಹೊಂಡಗಳಲ್ಲಿ ಹೆಚ್ಚು ನೀರು ನಿಲ್ಲಲು ಸಹಕಾರಿಯಾಗಲಿದೆ. ಜವನಗೊಂಡನಹಳ್ಳಿ ಹೋಬಳಿಯಲ್ಲಿ ನೀರಾವರಿ ಭೂಮಿ ಇಲ್ಲ. ಇದರಿಂದ ಸಾಕಷ್ಟು ರೈತರು ತೊಂದರೆಗೆ ಸಿಲುಕಿದ್ದಾರೆ. ಅಲ್ಲಿ ಕುಡಿಯುವ ನೀರು ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಹಗಲು ರಾತ್ರಿ ಎನ್ನದೆ ಹೋರಾಟ ಮಾಡುತ್ತಿದ್ದಾರೆ. ಕಲುವಳ್ಳಿ ಭಾಗದ ರೈತರಿಗೆ ನೀರಾವರಿ ವ್ಯವಸ್ಥೆ ಮಾಡಬೇಕಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುಂಠಿತವಾಗಿದೆ. ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸದೇ ರಾಜ್ಯ ಸರ್ಕಾರ ಕಾಮಗಾರಿ ವೇಗವನ್ನು ಹೆಚ್ಚಿಸಬೇಕು. ಭದ್ರಾ ಕಾಮಗಾರಿ ಪೂರ್ಣಗೊಳಿಸಿ ಭದ್ರಾ ಜಲಾಶಯದಿಂದ ವಿವಿ ಸಾಗರ ಡ್ಯಾಂಗೆ ನೀರು ಹರಿಸುವ ಮೂಲಕ ಜೆಜಿ ಹಳ್ಳಿ ಭಾಗದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ವಹಿಸಬೇಕು.ದೇಶದ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದ್ದು ಮಹಿಳೆಯರು ಮನಸ್ಸು ಮಾಡಿದರೆ ದೇಶವನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಬಹುದು. ಇಂತಹ ರೈತರ ಕಾರ್ಯಕ್ರಮಗಳಲ್ಲಿ ರೈತ ಮಹಿಳೆಯರು ಭಾಗವಹಿಸುವುದು ಸಂತಸದ ಸಂಗತಿಯಾಗಿದ್ದು ಕೃಷಿ ವಿಚಾರಗಳನ್ನು ಓರ್ವ ಮಹಿಳೆ ತಿಳಿದುಕೊಂಡು ಹತ್ತು ಜನರಿಗೆ ತಲುಪಿಸಬೇಕು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ರೈತ ಸಂಘದ ಅಧ್ಯಕ್ಷ ರಂಗಸ್ವಾಮಿ ಸೇರಿದಂತೆ ನೂರಾರು ರೈತರು ಮಹಿಳೆಯರು ಹಾಜರಿದ್ದರು.