ವಿನಾಶದಂಚಿನಲ್ಲಿರುವ ತೆಂಗು ಬೆಳೆ ಸಂರಕ್ಷಿಸಿ: ಶಾಸಕ ಶಿವಲಿಂಗೇಗೌಡ

KannadaprabhaNewsNetwork |  
Published : Jun 01, 2025, 02:25 AM IST
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು. ಎಂ.ಜಿ.ಸಂತೋಷ್ ಕುಮಾರ್, ಸತೀಶ್, ಧರ್ಮಶೇಖರ್, ಕೃಷ್ಣಮೂರ್ತಿ, ಅರುಣ್ ಕುಮಾರ್ ಇತರರಿದ್ದಾರೆ. | Kannada Prabha

ಸಾರಾಂಶ

ಅಲ್ಲದೇ ಜಂಟಿ ನಿರ್ದೇಶಕಿ ಮಂಗಳಾ ಅವರಿಗೂ ದೂರವಾಣಿ ಕರೆ ಮಾಡಿ ವಾಸ್ತವ ತೆರೆದಿಟ್ಟು ಸಂಕಷ್ಟಕ್ಕೆ ಸಿಲುಕಿರುವ ಬೆಳೆ ರಕ್ಷಿಸದಿದ್ದರೆ ಉಳಿಗಾಲವಿಲ್ಲ. ಎಲ್ಲರೂ ಸಮರೋಪಾದಿಯಲ್ಲಿ ಒಗ್ಗೂಡಿ ಕೆಲಸ ಮಾಡಬೇಕಿದ್ದು, ಸೂಕ್ತ ತಯಾರಿ ಮಾಡಿಕೊಳ್ಳಿ ಎಂದು ಸೂಚ್ಯವಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿನಾಶದ ಅಂಚಿನಲ್ಲಿರುವ ತೆಂಗು ಬೆಳೆಯ ಪುನಶ್ಚೇತನಕ್ಕೆ ತೋಟಗಾರಿಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಂಡಸಿ, ಜಾವಗಲ್, ಬಾಣಾವರ, ಕಸಬಾ ಹಾಗೂ ಕಣಕಟ್ಟೆ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು ೫೨ ಸಾವಿರ ಹೆಕ್ಟೇರ್ ನಲ್ಲಿ ತೆಂಗು ಬೆಳೆಯಿದೆ. ರಸ ಸೋರುವಿಕೆ, ಕಪ್ಪುತಲೆ ಹುಳುವಿನ ಬಾಧೆ, ಗರಿ ರೋಗ ಸೇರಿದಂತೆ ಹತ್ತು ಹಲವು ಕಾರಣದಿಂದಾಗಿ ಫಸಲು ಸಂಪೂರ್ಣ ಕೈಕೊಟ್ಟಿದೆ ಎಂದು ಶಾಸಕರು ಸಭೆಗೆ ವಿವರಿಸಿದಾಗ. ರೋಗ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕಿ ಸೀಮಾ ಸಭೆಗೆ ಮಾಹಿತಿ ನೀಡಿದರು.

ತಕ್ಷಣವೇ ಮೈಕ್ ಹಿಡಿದ ಕೆ.ಎಂ.ಶಿವಲಿಂಗೇಗೌಡ ೮೦ ರು. ತೆತ್ತು ತೆಂಗಿನ ಕಾಯಿ ಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ. ತೋಟಗಾರಿಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ತೆಂಗು ಬೆಳೆಗಾರರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು, ರೈತರು ಹಾಗೂ ಅಧಿಕಾರಿಗಳ ಸಭೆ ಕರೆಯಬೇಕು. ಈ ಸಂಬಂಧ ತೋಟಗಾರಿಕಾ ಸಚಿವರೊಂದಿಗೆ ಮಾತನಾಡಲು ಸಿದ್ಧನಿದ್ದೇನೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸೀಮಾ ಅವರಿಗೆ ತಾಕೀತು ಮಾಡಿದರು.

ಅಲ್ಲದೇ ಜಂಟಿ ನಿರ್ದೇಶಕಿ ಮಂಗಳಾ ಅವರಿಗೂ ದೂರವಾಣಿ ಕರೆ ಮಾಡಿ ವಾಸ್ತವ ತೆರೆದಿಟ್ಟು ಸಂಕಷ್ಟಕ್ಕೆ ಸಿಲುಕಿರುವ ಬೆಳೆ ರಕ್ಷಿಸದಿದ್ದರೆ ಉಳಿಗಾಲವಿಲ್ಲ. ಎಲ್ಲರೂ ಸಮರೋಪಾದಿಯಲ್ಲಿ ಒಗ್ಗೂಡಿ ಕೆಲಸ ಮಾಡಬೇಕಿದ್ದು, ಸೂಕ್ತ ತಯಾರಿ ಮಾಡಿಕೊಳ್ಳಿ ಎಂದು ಸೂಚ್ಯವಾಗಿ ಹೇಳಿದರು.

ಕೆಡಿಪಿ ಸದಸ್ಯ ಗಂಡಸಿ ಅಯ್ಯಣ್ಣ ಮಾತನಾಡಿ, ಬಿತ್ತನೆಯಾಗಿರುವ ಮುಸುಕಿನ ಜೋಳಕ್ಕೆ ರೋಗಬಾಧೆ ವಿಪರೀತವಾಗಿದ್ದು, ನಿಯಂತ್ರಣ ಅಸಾಧ್ಯವಾಗಿದೆ. ನಿರ್ದಿಷ್ಟ ಕಂಪನಿಯ ಬೀಜ ಬಳಕೆಗೆ ಅವಕಾಶ ಮಾಡಿಕೊಡಬೇಕು. ಕಳಪೆ ದಾಸ್ತಾನು ಮಾರಾಟ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗಮನಸೆಳೆದರು.

ಕೃಷಿ ಸಹಾಯಕ ನಿರ್ದೇಶಕ ಎ.ಪಿ.ಶಿವಕುಮಾರ್ ಮಾತನಾಡಿ, ಪದೇ ಪದೆ ಒಂದೇ ಬಗೆಯ ಬೆಳೆ ಬೆಳೆಯುತ್ತಿರುವುದರಿಂದ ಇಳುವರಿ ಕೊರತೆ, ರೋಗಬಾಧೆ ಕಂಡುಬರುತ್ತಿದೆ. ರೈತರು ಹೆಸರು, ಅಲಸಂಧೆ, ಉದ್ದು ಸೇರಿದಂತೆ ಪರ್ಯಾಯ ಬೆಳೆ ಬೆಳೆದಲ್ಲಿ ರೋಗ ನಿಯಂತ್ರಣ ಸಾಧ್ಯವಾಗಲಿದೆ ಎಂದರು.

ಕಳಪೆ ಬಿತ್ತನೆ ಬೀಜ ವಿತರಣಾ ಕಂಪನಿ ವಿರುದ್ಧ ಕ್ರಮ ಜರುಗಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಲೂಕಿನಲ್ಲಿ ರೇಷ್ಮೆ ಕೃಷಿ ವಿಸ್ತರಣೆ ಅಗತ್ಯತೆ ಕುರಿತು ಗಮನ ಸೆಳೆಯಲಾಯಿತು. ಅರಣ್ಯ, ಅಬಕಾರಿ,ಆಹಾರ, ಶಿಕ್ಷಣ, ಆರೋಗ್ಯ,ಸಮಾಜ ಕಲ್ಯಾಣ, ಬಿಸಿಎ, ಎತ್ತಿನಹೊಳೆ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಕುರಿತು ಸುದೀರ್ಘ ಚರ್ಚೆ ನಡೆಯಿತು.

ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ತಾಪಂ ಇಒ ಸತೀಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಗ್ರಾಮಾಂತರ ಠಾಣೆ ಸಿಪಿಐ ಅರುಣ್ ಕುಮಾರ್, ಪೌರಾಯುಕ್ತ ಎಚ್.ಟಿ. ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕೆಡಿಪಿ ಸದಸ್ಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ