ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಾತಾವರಣದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ತಪ್ಪಿಸಲು ಪರಿಸರ ರಕ್ಷಣೆ ಕೆಲಸಗಳನ್ನು ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಅರಣ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘ ಇವರ ಸಹಯೋಗದಲ್ಲಿ ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ, “ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪರಿಸರ ಮಾಲಿನ್ಯ ತಡೆಗಟ್ಟಿವಾತಾವರಣದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಆತಂಕಕಾರಿ ವಿಚಾರ. ನಿಷೇಧಿತ ಪ್ಲಾಸ್ಟಿಕ್ ಬಳಕೆ, ಜಲಮೂಲಗಳ ಕಲುಷಿತಗೊಳಿಸುವುದು, ಅರಣ್ಯ ನಾಶದಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಹಸಿರನ್ನು ಉಳಿಸಿ, ಬೆಳೆಸುವುದು, ಮಾಲಿನ್ಯವನ್ನು ತಡೆಗಟ್ಟಿ ಪರಿಸರ ಸಮತೋಲನ ಕಾಪಾಡುವುದು ಭೂಮಿ ಮೇಲಿರುವ ಪ್ರತಿ ಜೀವಿಯ ಸುಸ್ಥಿರ ಜೀವನಕ್ಕೆ ನೆರವಾಗಲಿದೆ. ಪರಿಸರ ರಕ್ಷಣೆಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮುಂದಿನ ಪೀಳಿಗೆಗೂ ಉತ್ತಮ ಪರಿಸರ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಾತನಾಡಿ, ಭಾರತೀಯರು ವಾರ್ಷಿಕ ಸರಾಸರಿ 35 ಕೆಜಿ ರಷ್ಟು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಎಂಬ ಅಭಿಯಾನವನ್ನು ಎರಡು ವರ್ಷಗಳಿಂದ ಹಮ್ಮಿಕೊಂಡು ಜಿಲ್ಲಾದ್ಯಂತ 17 ಸಾವಿರ ಕೆಜಿ ಪ್ಲಾಸ್ಟಿಕ್ ವಶ ಪಡೆದುಕೊಂಡು 18 ಲಕ್ಷ ರೂಪಾಯಿ ದಂಡ ವಿಧಿಸಿದ್ದೇವೆ. ಎಲ್ಲರು ಪಣತೊಟ್ಟು ಪರಿಸರ ರಕ್ಷಣೆಗೆ ಮುಂದಾಗೋಣ ಎಂದು ಕರೆ ನೀಡಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ಪ್ರತಿವರ್ಷ ನಿಮ್ಮ ಜನ್ಮದಿನವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಒಂದು ಗಿಡ ನೆಡುವುದು ಹಾಗೂ ನಮ್ಮ ಮನೆಯ ಆವರಣದಲ್ಲಿ ನೈಸರ್ಗಿಕ ಔಷಧಿಯುಳ್ಳ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬಹುದು ಎಂದು ಶಾಲಾ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ನ್ಯಾ. ಬಿ. ಶಿಲ್ಪ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ ವೆಂಕಟೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಜಿಲ್ಲಾ ಪರಿಸರ ಅಧಿಕಾರಿ ಡಾ. ದೊಡ್ಡಶಾನಯ್ಯ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಲಿಂಗರಾಜಪ್ಪ, ಪೋಲಿಸ್ ಉಪಾಧೀಕ್ಷಕ ಎಸ್.ಶಿವಕುಮಾರ್ ಮತ್ತಿತರರು ಇದ್ದರು.