ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ.ಅಭಿಷೇಕ್, ಎನ್.ಎಚ್.ಜಗನ್ನಾಥ, ಕೆ.ಎ.ನೆಹರು, ಸಂದೀಪ್ ಪಿ.ಅಭಯಂಕರ್, ಸೈಯದ್ ಅಹಮದ್ ಷಾ ಹುಸೈನಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ.ಸೆಂದಿಲ್ ಕುಮಾರ್, ತಹಶೀನ್ ಬಾನು ದವಡಿ, ವಿ.ಪಿ.ಕಾರ್ಯಪ್ಪ, ವಲಯ ಅರಣ್ಯ ಸಂರಕ್ಷಣಾಧಿಕಾರಿ ತ್ಯಾಗರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಂ.ಸಿ.ಅರುಣ್ ಕುಮಾರ್, ಕೊಡಗು ವೃತ್ತ ಪತ್ರಾಂಕಿತ ವ್ಯವಸ್ಥಾಪಕರಾದ ಪಿ.ಪಿ.ಸರೋಜ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ, ಗಸ್ತು ಅರಣ್ಯ ಪಾಲಕರಾದ ನಾಗರಾಜ ರಡಾರಟ್ಟಿ, ಅರಣ್ಯ ವೀಕ್ಷಕರಾದ ಸಚಿನ್ ತಳವಾರ, ಕಚೇರಿ ಜಮೆದಾರರಾದ ಎಚ್.ಎಸ್.ಕಣ್ಣಯ್ಯ, ಆನೆ ಮಾವುತ ಅಣ್ಣಯ್ಯ ದೊರೆಯಪ್ಪ, ಆರ್‍ಆರ್‍ಟಿ ಸಿಬ್ಬಂದಿ ಕೆ.ಯು.ಕುಮಾರೇಶ್, ಅರಣ್ಯ ಕ್ಷೇಮಾಭಿವೃದ್ಧಿ ನೌಕರರ ಪರವಾಗಿ ಪಿ.ಪಿ.ಅಮ್ಮಣ್ಣಿ, ವಾಹನ ಚಾಲಕರ ಪರವಾಗಿ ಜಗದೀಶ್, ಪಿ.ಸಿ.ಇ ನೌಕರರ ಪರವಾಗಿ ಪುನೀತ್ ಕುಮಾರ್, ಪೊಲೀಸ್ ಇಲಾಖೆ ಪರವಾಗಿ ಎಎಸ್‍ಐ ಚೆನ್ನಕೇಶವ ಅವರು ಅರಣ್ಯ ಹುತಾತ್ಮಕರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿದರು.
ಬಳಿಕ ಮಾತನಾಡಿದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಅರಣ್ಯ ಸಂರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.ಅರಣ್ಯ ಸಂರಕ್ಷಣೆ ಜವಾಬ್ದಾರಿ:
ರಾಷ್ಟ್ರದ ಗಡಿ ಪ್ರದೇಶದಲ್ಲಿ ಸೈನಿಕರು, ರಾಷ್ಟ್ರದ ಒಳಗಡೆ ಆಂತರಿಕವಾಗಿ ಪೊಲೀಸರು ನಾಗರಿಕರ ರಕ್ಷಣೆ ಮಾಡುತ್ತಾರೆ. ಅದೇ ರೀತಿ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ:
ಸ್ವಾಭಾವಿಕ ಹಾಗೂ ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅರಣ್ಯ ಸಂರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದು, ಅವರಿಗೆ ಎಲ್ಲರೂ ಕೈಜೋಡಿಸಬೇಕು. ಮುಂದಿನ ಪೀಳಿಗೆಗೆ ಅರಣ್ಯ ಸಂಪತನ್ನು ಉಳಿಸಬೇಕು ಎಂದು ಹೇಳಿದರು.
‘ಅರಣ್ಯ ಇಲಾಖೆ ವನ್ಯಜೀವಿಗಳ ಹಾವಳಿ ನಿಯಂತ್ರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಕೆಲವು ಸಂದರ್ಭಗಳಲ್ಲಿ ಯಶಸ್ಸು ಕಾಣುತ್ತೇವೆ. ಕೆಲವು ಸಂದರ್ಭದಲ್ಲಿ ವಿಫಲವೂ ಸಹ ಆಗಿದ್ದೇವೆ. ಅರಣ್ಯ ಸಂರಕ್ಷಣೆ ಜೊತೆಗೆ ಎಲ್ಲಾ ಜನರ ಜೀವ ರಕ್ಷಣೆ ಸಹ ಅತೀ ಮುಖ್ಯ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ವಿವರಿಸಿದರು.’
ಅರಣ್ಯ ಇಲಾಖೆ ಸಿಬ್ಬಂದಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ವಾರ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಪ್ರತೀನಿತ್ಯದ ಜಂಜಾಟದಿಂದ ಹೊರಬರಲು ಸಹಕಾರಿಯಾಗಲಿದೆ ಎಂದು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ಅರಣ್ಯ ಸೇವೆ ಅಧಿಕಾರಿಯಾಗಿದ್ದ ಪಿ.ಶ್ರೀನಿವಾಸ್ ಅವರು ಆದರ್ಶ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಕಾಡಿಗಾಗಿ ಜನನ, ಕಾಡಿಗಾಗಿ ಜೀವನ, ಕಾಡಿಗಾಗಿ ಮರಣ ಎಂಬುದನ್ನೇ ತತ್ವವಾಗಿ ಇಟ್ಟುಕೊಂಡಿದ್ದ ಕನ್ನಡದ ಅರಣ್ಯ ಇಲಾಖೆಯ ವೀರ ಅಭಿಮನ್ಯು ಎಂದೇ ಕರೆಯುತ್ತಿದ್ದರು ಎಂದು ಸ್ಮರಿಸಿದರು.
ಪಿ.ಶ್ರೀನಿವಾಸ್ ಅವರ ಕಾರ್ಯದಕ್ಷತೆ ಮೆಚ್ಚಿ ಭಾರತ ಸರ್ಕಾರವು ಇವರಿಗೆ ‘ಕೀರ್ತಿಚಕ್ರ’ ಎಂಬ ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ ಎಂದರು.ಕಾಡುಗಳ್ಳ, ದಂತಚೋರ, ವೀರಪ್ಪನ್‍ನ ನಯವಂಚನೆಗೆ ಸಿಲುಕಿ 1991 ರ ನವೆಂಬರ್, 10 ರಂದು ವಿಧಿವಶರಾದರು ಎಂದು ತಿಳಿಸಿದರು.
ವೀರಪ್ಪನ್‍ನ ವಂಚನೆಯಿಂದ ಹುತಾತ್ಮರಾದ ಕೊಳ್ಳೆಗಾಲದ ಅರಣ್ಯ ರಕ್ಷಕರಾದ ಬಿ.ಸಿ.ಮೋಹನಯ್ಯ ಇವರ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಶಿರಸಿ ಮರಗಳ್ಳರ ದೌರ್ಜನ್ಯಕ್ಕೆ ಬಲಿಯಾದ ವಲಯ ಅರಣ್ಯಾಧಿಕಾರಿ ಅರವಿಂದ ಹೆಗಡೆ ಇವರ ಶೌರ್ಯವು ಕೂಡ ಸ್ಮರಣೀಯವಾಗಿದೆ ಎಂದರು.ಕಳೆದ ಸುಮಾರು 49 ವರ್ಷಗಳಿಂದ ಅಮೂಲ್ಯ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮಗಳ ಬದುಕನ್ನೇ ಮುಡುಪಾಗಿಟ್ಟು, ಕಳ್ಳಸಾಗಾಣಿಕೆದಾರರ ಮರಗಳ್ಳರ ದಂತಚೋರರ ಜೊತೆಗೆ ಕೆಚ್ಚೆದೆಯಿಂದ ಹೋರಾಡಿ ನೈಸರ್ಗಿಕ ಸಂಪತನ್ನು ಉಳಿಸಲು ತಮ್ಮ ಜೀವನವನ್ನೇ ನಾಡಿಗಾಗಿ ತ್ಯಾಗ ಮಾಡಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರ ಸ್ಮರಣೆಗಾಗಿ ಅರಣ್ಯ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ ಎಂದರು. ಉಪ ವಲಯ ಅರಣ್ಯಾಧಿಕಾರಿ ಐಶ್ವರ್ಯ ಆರ್.ಗೌಡರ ಅವರು ನಿರೂಪಿಸಿದರು.