ಕನ್ನಡಪ್ರಭ ವಾರ್ತೆ ನಾಪೋಕ್ಲು
ನಿರ್ಲಕ್ಷಿಸಲ್ಪಟ್ಟ ಮತ್ತು ಅಳಿವಿನಂಚಿನ ಸಮುದಾಯಗಳ ರಕ್ಷಣೆ ನಾಗರಿಕ ಸಮಾಜದ ಹೊಣೆಯಾಗಬೇಕು ಎಂದು ಕೊಡವ ಭಾಷಿಕ ಸಮುದಾಯಗಳ ಕೂಟ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.ಹಾಕತ್ತೂರು ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೊಡಗಿನ ಹಲವು ಸಮುದಾಯಗಳು ಇಂದು ಅಳಿವಿನಂಚಿಗೆ ಬಂದು ತಲುಪಿದ್ದು, ಅದರಲ್ಲಿ ಅರಮನೆಪಾಲೆ ಸಮುದಾಯವು ಒಂದು. ಇದು ಕೊಡಗಿನಲ್ಲಿ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಕೊಡಗಿನ ಕೊಡವ ಸಂಸ್ಕೃತಿಯ ಮೂಲ ಬೇರುಗಳನ್ನು ಹೊಂದಿರುವ ಈ ಸಮುದಾಯವನ್ನು ಸರ್ಕಾರ ಇಲ್ಲಿಯವರೆಗೆ ಗುರುತಿಸದೆ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ನಿರ್ಲಕ್ಷ್ಯಕ್ಕೆ ಒಳಗಾಗುವ ಸಮುದಾಯಗಳ ರಕ್ಷಣೆಗೆ ಕೊಡವ ಭಾಷಿಕ ಸಮುದಾಯಗಳ ಕೂಟ ಎಲ್ಲ ರೀತಿಯ ಸಲಹೆ, ಸಹಕಾರ ನೀಡಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಘಟಕ ಅಧ್ಯಕ್ಷ ಹಾಗೂ ಅರಮನೆಪಾಲೆ ಸಮಾಜದ ಪ್ರಧಾನ ಸಂಘಟಕ ಪಿ.ಕೆ.ಮಂದಣ್ಣ ಮಾತನಾಡಿ, ಕೊಡಗಿನ ಅತೀ ಪುರಾತನ ಅರಮನೆಪಾಲೆ ಜನಾಂಗ ಇಂದು ಅತ್ಯಲ್ಪ ಜನಸಂಖ್ಯೆಯನ್ನು ಹೊಂದಿದ್ದು, ವಿನಾಶದ ಹಾದಿಯಲ್ಲಿದೆ. ಸರ್ಕಾರದ ಲೆಕ್ಕಗಳಲ್ಲಿ 15 ಸಾವಿರ ಜನಸಂಖ್ಯೆ ಇದೆ. ಜಾತಿಗಳಿಗೆ ಸಂಬಂಧಿಸಿದಂತೆ ಬ್ರಿಟಿಷರ ಅವೈಜ್ಞಾನಿಕ ನೀತಿಗಳನ್ನೇ ಸ್ವತಂತ್ರ ಭಾರತದ ಸರ್ಕಾರಗಳೂ ಅನುಸರಿಸುತ್ತಿವೆ ಎಂದು ಆರೋಪಿಸಿದರು.
ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಅರಮನೆಪಾಲೆ ಸಮುದಾಯಕ್ಕೆ ಕೊಡಗಿನಲ್ಲಿ ಜಾತಿಯಾಗಿ ಮಾನ್ಯತೆಯೇ ಇಲ್ಲದಾಗಿರುವುದು ದೊಡ್ಡ ದುರಂತ. ಕೇವಲ ಓಟು ಬ್ಯಾಂಕ್ ರಾಜಕಾರಣಕ್ಕಾಗಿ ಜನಾಂಗವನ್ನು ಒತ್ತಾಯ ಪೂರ್ವಕವಾಗಿ ಯಾವುದೋ ಜಾತಿಗೆ ಸೇರಿಸಲಾಗುತ್ತಿದೆ. ಕೊಡವ ಸಂಸ್ಕೃತಿ, ಆಚಾರ ವಿಚಾರ, ಪದ್ಧತಿ, ಪರಂಪರೆಯ ಆಚರಣೆಗೆ ಸಮುದಾಯ ಭಯ ಪಡುವಂತಾಗಿದೆ ಎಂದರು.ಸಮಾಜದ ಪ್ರಧಾನ ಸಂಚಾಲಕ ಅರಮನೆಪಾಲೆರ ಮಂಜುನಾಥ್ ಜಿ. ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅರಮನೆಪಾಲೆರ ದೇವಯ್ಯ ಕಕ್ಕಬ್ಬೆ, ಮಾಜಿ ಸೈನಿಕರಾದ ಅರಮನೆಪಾಲೆರ ಸುಭಾಷ್ ಬಾಳುಗೋಡು, ಅರಮನೆಪಾಲೆರ ಶಿವಪ್ಪ ಕಂಡಿಮಕ್ಕಿ, ಅರಮನೆಪಾಲೆ ಸಮಾಜದ ಕಾರ್ಯದರ್ಶಿ ಅರಮನೆಪಾಲೆರ ದೇವಯ್ಯ ಹಾಕತ್ತೂರು, ವಿವಿಧ ಗ್ರಾಮ ಸಮಿತಿ, ಸಮಾಜದ ಕ್ರೀಡಾ ಸಮಿತಿ, ಮರಣ ಧನ ಸಹಾಯ ನಿಧಿ ಸಮಿತಿ, ಕ್ರಿಕೆಟ್ ಪಂದ್ಯಾವಳಿ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು. ನಿತ್ಯಾ ಹಾಗೂ ವರ್ಷ ಪ್ರಾರ್ಥಿಸಿದರು. ರಘು ತಂಡದಿಂದ ಪ್ರದರ್ಶಿಸಲ್ಪಟ್ಟ ಹಾಕತ್ತೂರು ಭಾಗದ ಅರಮನೆಪಾಲೆ ಜಾನಪದ ಪುತ್ತರಿ ಆಚರಣೆ ಕೋರಕಳಿ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು. ಡಿಂಪಲ್ ಪೇರೂರು, ಹಾಕತ್ತೂರಿನ ಯಶಸ್ವಿನಿ ಹಾಗೂ ವರ್ಷ ಅವರ ನೃತ್ಯ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.ನೂತನ ಆಡಳಿತ ಮಂಡಳಿ:
ಅರಮನೆಪಾಲೆ ಸಮಾಜದ ಮುಂದಿನ 5 ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಅರಮನೆಪಾಲೆರ ದೇವಯ್ಯ ಕಕ್ಕಬ್ಬೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅರಮನೆಪಾಲೆರ ಸುಜು ದೇವಯ್ಯ ಬಾಳುಗೋಡು, ಕಾರ್ಯದರ್ಶಿಯಾಗಿ ಅರಮನೆಪಾಲೆರ ದೇವಯ್ಯ ಹಾಕತ್ತೂರು, ಖಜಾಂಚಿಯಾಗಿ ಸುಭಾಷ್ ಬಾಳುಗೋಡು ನೇಮಕಗೊಂಡರು. ನಿರ್ದೇಶಕರಾಗಿ ಅರಮನೆಪಾಲೆರ ದಿನೇಶ್ ಬಿಳಿಗೇರಿ, ಲೀನಾಶಿವಪ್ಪ ಕಂಡಿಮಕ್ಕಿ, ದಮಯಂತಿ ಬಿಳಿಗೇರಿ, ಭಾರತಿ ಚೆಯ್ಯಂಡಾಣೆ, ಸರಿತಾ ನಾಗಬಾಣೆ, ಅರಮನೆಪಾಲೆರ ಯತೀಶ್ ಬಿದ್ದಪ್ಪ ಬಾಳುಗೋಡು, ಅರಮನೆಪಾಲೆರ ಮಧು ಕುಂಜಿಲ, ಕಕ್ಕಬ್ಬೆ, ಅರಮನೆಪಾಲೆರ ಗಣೇಶ್ ಚೆಯ್ಯಂಡಾಣೆ, ಅರಮನೆಪಾಲೆರ ವಿಶ್ವನಾಥ್ ಪೇರೂರು, ಅರಮನೆಪಾಲೆರ ಶಿವಪ್ಪ ಚೇಲಾವರ, ಅರಮನೆಪಾಲೆರ ಮಹೇಶ್ ಮಾದಾಪುರ ಅವರುಗಳನ್ನು ಆಯ್ಕೆ ಮಾಡಲಾಯಿತು.