ಹಾನಗಲ್ಲ: ಜೀವ ಜಲ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆ ರಾಜ್ಯದಲ್ಲಿ ೫೬೬ ಕರೆಗಳ ಪುನಶ್ಚೇತನದ ಮೂಲಕ ನೀರು ಇಂಗುವಿಕೆ ಹಾಗೂ ನೀರಿನ ಸದುಪಯೋಗದ ಸಂಕಲ್ಪವನ್ನು ಈಡೇರಿಸುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನಾ ಸಂಘದ ಮದ್ಯವರ್ಜನ ವ್ಯವಸ್ಥಾ ಸಮಿತಿ ಅಧ್ಯಕ್ಷ ನಾಗರಾಜ ಪಾವಲಿ ತಿಳಿಸಿದರು.
ಜೀವ ಜಲವನ್ನು ರಕ್ಷಣೆ ಮಾಡುವ ಹೊಣೆ ಒಂದೆರಡು ದಿನಕ್ಕಲ್ಲ. ಇಂದು ಅಂತರ್ಜಲ ಕುಸಿದು, ನೀರಿನ ಬರ, ಇದರ ಜೊತೆಗೆ ಬರಗಾಲದ ದೊಡ್ಡ ತೊಂದರೆ ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ಕೇವಲ ಸಂಘ ಸಂಸ್ಥೆಗಳು ಮಾತ್ರವಲ್ಲ ಸಾರ್ವಜನಿಕರು ನೀರನ್ನು ಹಿತ ಮಿತವಾಗಿ ಬಳಸುವುದು ಹಾಗೂ ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಈಗ ಶಾಲೆ ಕಾಲೇಜುಗಳಲ್ಲಿ ಇಂತಹ ತರಬೇತಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹಾವೇರಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ನೀರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಇದು ಪ್ರಕೃತಿಯ ಕೊಡುಗೆ. ಇಂದು ಪರಿಸರವನ್ನು ಹಾಳು ಮಾಡುವುದರ ಜೊತೆಗೆ ನೀರನ್ನೂ ಹಾಳು ಮಾಡುತ್ತಿದ್ದೇವೆ. ನಮ್ಮ ಕೆರೆ ನಮ್ಮ ನೀರು ಎಂಬ ಜವಾಬ್ದಾರಿ ಸಾರ್ವಜನಿಕವಾಗಿ ಬಂದರೆ ಮಾತ್ರ ನೀರನ್ನು ಉಳಿಸಲು ಸಾಧ್ಯ. ಜನ ಜಾನುವಾರು ನೀರಿಲ್ಲದೆ ಪರಿತಪಿಸುವ ಸ್ಥಿತಿ ಬರದಿರಲು ಈಗಲೇ ಎಚ್ಚರಗೊಳ್ಳೋಣ. ಈ ಕೆರೆಯ ಪುನಶ್ಚೇತನಕ್ಕಾಗಿ ೫.೬೧ ಲಕ್ಷ ಖರ್ಚು ಮಾಡಲಾಗಿದ್ದು, ಇದರ ಸದುಪಯೋಗವಾಗಲಿ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಮಾತನಾಡಿ, ಅಕ್ಕಿಆಲೂರಿನಲ್ಲಿ ಈ ಕೆರೆ ಅಭಿವೃದ್ಧಿಯ ವಿಷಯದಲ್ಲಿ ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರು ಉತ್ತಮ ಸಹಕಾರ ನೀಡಿದ್ದಾರೆ. ಈ ಕೆರೆ ನಿಮಗಾಗಿ ಇದೆ. ಇದು ಬಹುಕಾಲ ಸಾರ್ವಜನಿಕರಿಗೆ ನೀರೊದಗಿಸುವ ಜಲ ಮೂಲವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರಾದ ಪೂಜಾ ದುರ್ಗದ, ಲೀಲಾವತಿ ಹಿರೇಮಠ, ಸುಜಾತಾ ಸವಣೂರ, ಒಕ್ಕೂಟದ ಅಧ್ಯಕ್ಷೆ ದೀಪಾ ಕಟಗಿ, ದ್ರಾಕ್ಷಾಯಿಣಿ ಕರಿದ್ಯಾವಣ್ಣನವರ, ಕೃಷಿ ಮೇಲ್ವಿಚಾರಕರಾದ ಮಹಂತೇಶ ಹರಕುಣಿ, ಮೇಲ್ವಿಚಾರಕರ ಶ್ರೀನಿವಾಸ ಮೂಗೆರ, ರಶ್ಮಿ ಹೆಬ್ಬಾರ, ಅರ್ಚನಾ ಸರ್ವದೆ, ಶ್ರುತಿ ಬೊಮ್ಮನಹಳ್ಳಿ ಮೊದಲಾದವರಿದ್ದರು.