ಸಮೃದ್ಧ ಪರಿಸರ ಸಂರಕ್ಷಿಸುವುದು ನಮ್ಮೆಲರ ಕರ್ತವ್ಯ: ಎಚ್.ಟಿ.ಭೈರಪ್ಪ

KannadaprabhaNewsNetwork | Published : May 24, 2024 12:52 AM

ಸಾರಾಂಶ

ಅರಣ್ಯ ಸಂಪತ್ತು ಈಗಾಗಲೇ ಕ್ಷೀಣಿಸಿದೆ. ಶೇ. 33 ರಷ್ಟಿದ್ದ ಅರಣ್ಯವು ಶೇ. 17 ಕ್ಕೆ ಇಳಿದಿದೆ. ಸಕಾಲಕ್ಕೆ ಮಳೆ ಬೆಳೆ ಕಾಣಲು ಹಸಿರು ಪರಿಸರ ಅತ್ಯಗತ್ಯ. ಬಿಸಿಲಿನ ತಾಪಮಾನ ಜನರಿಗೆ ತಟ್ಟಿದೆ. 50 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದ್ದು, 60 ರಿಂದ 70 ಡಿಗ್ರಿ ಮುಟ್ಟಿದಲ್ಲಿ ಮನುಷ್ಯ ಕೂಡ ಬದುಕಲಾರ.

ಕನ್ನಡಪ್ರಭ ವಾರ್ತೆ ಗುಬ್ಬಿ

ಜಾಗತಿಕ ತಾಪಮಾನ ಇಳಿಸಲು ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ನಾಗರಿಕ ಸಮಾಜ ಹಸಿರು ಕ್ರಾಂತಿ ಮಾಡಲು ಪ್ರತಿಜ್ಞೆ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಎಂಜಿ ರಸ್ತೆ ಬದಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಬುದ್ಧ ಪೌರ್ಣಿಮೆಯಂದು ಸಸಿ ನೆಟ್ಟು ಮಾತನಾಡಿದ ಅವರು, ಸರ್ಕಾರಿ ಜಾಗ, ಕಚೇರಿ ಅವರಣಗಳು, ರಸ್ತೆ ಬದಿಯಲ್ಲಿ ಸಸಿ ನೆಟ್ಟು ಪೋಷಿಸುವ ಅರಣ್ಯ ಇಲಾಖೆಯ ಕಾರ್ಯಕ್ಕೆ ಸಮುದಾಯ ಸಹಕಾರ ನೀಡಬೇಕು ಎಂದರು.

ಅರಣ್ಯ ಸಂಪತ್ತು ಈಗಾಗಲೇ ಕ್ಷೀಣಿಸಿದೆ. ಶೇ. 33 ರಷ್ಟಿದ್ದ ಅರಣ್ಯವು ಶೇ. 17 ಕ್ಕೆ ಇಳಿದಿದೆ. ಸಕಾಲಕ್ಕೆ ಮಳೆ ಬೆಳೆ ಕಾಣಲು ಹಸಿರು ಪರಿಸರ ಅತ್ಯಗತ್ಯ. ಬಿಸಿಲಿನ ತಾಪಮಾನ ಜನರಿಗೆ ತಟ್ಟಿದೆ. 50 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದ್ದು, 60 ರಿಂದ 70 ಡಿಗ್ರಿ ಮುಟ್ಟಿದಲ್ಲಿ ಮನುಷ್ಯ ಕೂಡ ಬದುಕಲಾರ. ಸೂಕ್ಷ್ಮ ಜೀವಿಗಳು ಈಗಾಗಲೇ ಕಣ್ಮರೆಯಾಗಿವೆ. ಬಿಸಿಲಿನ ಝಳ ಕಡಿಮೆಗೊಳಿಸಲು ಪ್ರತಿಯೊಬ್ಬ ವ್ಯಕ್ತಿಯೂ ಮೂರು ಸಸಿ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.

ಅರಣ್ಯ ಇಲಾಖೆ ನಿವೃತ್ತಿ ಉಪ ವಲಯ ಅರಣ್ಯ ಅಧಿಕಾರಿ ಸೋಮಶೇಖರ್ ಮಾತನಾಡಿ, ಅರಣ್ಯ ಇಲಾಖೆ ಪ್ರತಿ ವರ್ಷ ಸಾಂಪ್ರದಾಯಿಕ ಸಸಿಗಳನ್ನು ಪೋಷಿಸಿ, ನರ್ಸರಿಯಲ್ಲಿ ಲಕ್ಷಾಂತರ ಸಸಿಗಳನ್ನು ಬೆಳೆಸಿದ್ದಾರೆ. ಸರ್ಕಾರಿ ಜಾಗಗಳು, ಗುಂಡು ತೋಪು, ರಸ್ತೆ ಬದಿ ಹಾಗೂ ಅರಣ್ಯ ಪ್ರದೇಶದಲ್ಲಿ ಸಸಿ ನೆಟ್ಟು ಪೋಷಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿನ ರೈತ ವರ್ಗ ತಮ್ಮ ಹೊಲ, ತೋಟದ ಬದಿಯಲ್ಲಿ ಸಸಿ ನೆಟ್ಟು ಬೆಳೆಸಬೇಕು. ಹಾಗೆಯೇ ಊರಿನಲ್ಲಿ ಬೆಳೆಸಿದ ಗಿಡ-ಮರಗಳನ್ನು ರಕ್ಷಿಸಬೇಕು ಎಂದರು.

ಬಿಜೆಪಿ ಮುಖಂಡ ಬಿ.ಲೋಕೇಶ್, ಪರಿಸರವಾದಿಗಳಾದ ಜಿ.ಆರ್.ರಮೇಶ್ ಗೌಡ, ಜಿ.ಎಸ್.ಮಂಜುನಾಥ್, ಉಪ ವಲಯ ಅರಣ್ಯ ಅಧಿಕಾರಿ ಸಿದ್ದಲಿಂಗಮೂರ್ತಿ, ಗಂಗಹನುಮಯ್ಯ, ಸುಬ್ರಹ್ಮಣ್ಯ ಇತರರು ಇದ್ದರು.

Share this article