ಕನ್ನಡಪ್ರಭ ವಾರ್ತೆ ಶಹಾಬಾದ
ಗ್ರಾಪಂ ಅನುದಾನ ಬಳಕೆಯಲ್ಲಿ ಲೋಕಾಯುಕ್ತರಿಗೆ ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸಲು ಪ್ರಯತ್ನಿಸಿದರೆ, ಸ್ಥಳದಲ್ಲಿಯೇ ಪ್ರಕರಣ ದಾಖಲಿಸಿ, ಕೊರಳ ಪಟ್ಟಿ ಹಿಡಿದು ಎಳೆದುಕೊಂಡು ಹೋಗಬೇಕಾಗುತ್ತದೆ ಎಂದು ಲೋಕಾಯುಕ್ತರಾದ ಅಂತೋನಿ ಜಾರ್ಜ ಅವರು ಭಂಕೂರ ಗ್ರಾಪಂ. ಪಿಡಿಒ, ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದರು.ಅವರು ಗ್ರಾಪಂ ಕಚೇರಿಗೆ ಭೇಟಿ ನೀಡಿ ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಕಂದಗೋಳ ಅವರು ಸ್ಮಶಾನ ಭೂಮಿ ಅಭಿವೃದ್ಧಿಗೆ ರಸ್ತೆ ಹಾಗೂ ತಂತಿ ಬೇಲಿ ನಿರ್ಮಿಸಲು 3 ಬಾರಿ ಟೆಂಡರ್ ಕರೆಯದೇ ಇರುವ ಬಗ್ಗೆ ಲೋಕಾಯುಕ್ತರ ಗಮನಕ್ಕೆ ತಂದರು. ಪಿಡಿಒ ರೇವಣಸಿದ್ದಪ್ಪ ಕಲಶೆಟ್ಟಿ ಅವರು 32 ಸಾವಿರ ರು. ಹಣವನ್ನು ತಂತಿ ಬೇಲಿಗಾಗಿ ನೀಡಲಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತರು ಟೆಂಡರ್ ಕರೆಯದೇ ಇಷ್ಟು ಹಣ ಹೇಗೆ ನೀಡಿದ್ದಿರಿ ಎಂದು ಪ್ರಶ್ನಿಸಿದರು.
ಗ್ರಾಪಂ ವ್ಯಾಪ್ತಿಯ ಭಂಕೂರ ವಾಡಾ ಹಾಗೂ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಮುಸ್ಲಿಂ ಸಮಾಜದ ಸ್ಮಶಾನ ಭೂಮಿ ಅಭಿವೃದ್ಧಿಗೆ ಕಾಮಗಾರಿ ಪಟ್ಟಿ ಕರೆದಿದ್ದೀರಿ, ಒಂದೇ ಸಮಾಜಕ್ಕೆ ಎರಡು ರುದ್ರಭೂಮಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಹಿಂದೂ ಸ್ಮಶಾನ ಭೂಮಿ ಅಭಿವೃದ್ಧಿಗೆ ಏಕೆ ಕಾಮಗಾರಿ ಪಟ್ಟಿ ಕರೆದಿಲ್ಲ ಎಂದು ಪ್ರಶ್ನಿಸಿದರು.ಅಧ್ಯಕ್ಷ ಶರಬಸಪ್ಪ ಧನ್ನಾ ಮಧ್ಯ ಪ್ರವೇಶಿಸಿ, ಆಟದ ಮೈದಾನದಲ್ಲಿ ವಾಲಿಬಾಲ್, ಕಬ್ಬಡ್ಡಿ, ಖೋ ಖೋ ಮೈದಾನದ ಅಭಿವೃದ್ಧಿಗೆ ರು.3.47 ಲಕ್ಷ ಮೀಸಲಿಟ್ಟಿರುವುದಾಗಿ ಮಾಹಿತಿ ನೀಡಿದರು. ಪತ್ರಿಕೆಯಲ್ಲಿ ಪ್ರಕಟಿತ ಕಾಮಗಾರಿ ದರಪಟ್ಟಿ ವಿಕ್ಷೀಸಿದಾಗ ಖೋ ಖೋ ಆಟದ ಮೈದಾನಕ್ಕೆ ರು.1.73 ಲಕ್ಷ. ಪ್ರತ್ಯೇಕ ದರ ಪಟ್ಟ ಕರೆದಿರುವುದನ್ನು ಕಂಡ ಲೋಕಾಯುಕ್ತರು ಸಣ್ಣ ಗ್ರಾಮದಲ್ಲಿ ಅದೆಂತಹ ಆಟದ ಮೈದಾನವಿದೆ ಎಂದು ಪ್ರಶ್ನಿಸಿ, ಈಗಲೇ ಸ್ಥಳ ಪರಿಶೀಲನೆ ನಡೆಸುತ್ತೇನೆ, ಇದರಲ್ಲಿ ತಪ್ಪು ಮಾಹಿತಿ, ತನಿಖೆಗೆ ದಿಕ್ಕು ತಪ್ಪಿಸಲು ಪ್ರಯತ್ನಿಸಿದರೆ, ಕ್ರಿಮಿನಲ್ ಪ್ರಕರಣ ದಾಖಲಿಸಿ, ಪಿಡಿಒ, ಅಧ್ಯಕ್ಷರಿಗೆ ಕೊರಳ ಪಟ್ಟಿ ಹಿಡಿದುಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಿಡಿಒ ಅವರಿಗೆ ವಿವಿಧ ಕಡತಗಳನ್ನು ತರಲು ಹೇಳಿದಾಗ ಎಲ್ಲಾ ಆನ್‍ಲೈನ್‍ನಲ್ಲಿ ಇದೆ ಎಂದು ನುಣುಚಿಕೊಂಡರು. ಜಮಾ ಬಂಧಿ ಕಡತ ಕೇಳಿದಾಗ ಯಾವುದೇ ಕಡತ ಇಲ್ಲವೆಂದು ಪಿಡಿಒ ಹೇಳಿದಾಗ, ಈ ಕುರಿತಿ ಅನುದಾನ ಹೇಗೆ ಹಂಚಿಕೆ ಮಾಡುತ್ತಿರಿ ಎಂದು ಪ್ರಶ್ನಿಸಿದರು. ತಾಪಂ ಭೇಟಿ ನೀಡಿದ ಪುಸ್ತಕ ತರಲು ಕೇಳಿದಾಗ ಕಳೆದ ಫೆ.1ರಂದು ಭೇಟಿ ನೀಡಿದ ಮಾಹಿತಿ ದೊರಕಿತು.ಈ ಕುರಿತು ಇಒ ಅವರಿಗೆ ಪ್ರಶ್ನಿಸಿದಾಗ ಚುನಾವಣೆ ಸಂದರ್ಭದಲ್ಲಿ ಗ್ರಾಮದಲ್ಲಿಯೇ ಇದ್ದೇನೆ ಎಂದು ಉತ್ತಿರಿಸಿದಾಗ, ಇಲ್ಲೆ ಇದ್ದರೆ ಭೇಟಿ ನೀಡಿದ ಕಡತಕ್ಕೆ ಸಹಿ ಮಾಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಗ್ರಾಪಂ. ಅಧ್ಯಕ್ಷರ ಹಾಗೂ ಪಿಡಿಒ ಅವರ ಕಾರ್ಯವೈಖರಿಗೆ ಆಕ್ರೋಶಗೊಂಡ ಲೋಕಾಯುಕ್ತರು ಎರಡು ದಿನದಲ್ಲಿ ಸಂಪೂರ್ಣ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕು ಎಂದು ತಾಪಂ.ಇಒ ಅವರಿಗೆ ಆದೇಶಿಸಿ, ಈ ಕುರಿತು ಕ್ರಮ ಕೈಗೊಳ್ಳದೆ ಇದ್ದಲ್ಲಿ ನಿಮ್ಮ ಮೇಲೆಯೇ ತನಿಖಾ ವರದಿ ಜಾರಿಗೆ ಮಾಡಲಾಗುವದು ಎಂದು ಎಚ್ಚರಿಸಿದರು.ಲೋಕಾಯುಕ್ತ ಪಿಐ ಅಕ್ಕಮಹಾದೇವಿ, ತಹಶೀಲ್ದಾರ ಮಲಶೆಟ್ಟಿ ಚಿದ್ರಾಯಿ, ತಾಪಂ.ಇಒ ಮಲ್ಲಿನಾಥ ರಾವೂರ ಇದ್ದರು.