ಗಜೇಂದ್ರಗಡ: ನೂರಾರು ಜಾತಿ, ಸಾವಿರಾರು ಧರ್ಮಗಳನ್ನು ಒಳಗೊಂಡ ಅಖಂಡ ಭಾರತ ಒಂದಾಗಿ ಬದುಕುತ್ತಿರುವುದಕ್ಕೆ ನಮ್ಮ ಸಂವಿಧಾನ ಕಾರಣವಾಗಿದ್ದು, ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಂವಿಧಾನ ನಮ್ಮ ಮೊದಲ ಧರ್ಮಗ್ರಂಥವಾಗಿದೆ. ಆದರೆ ಸಂವಿಧಾನದ ಕುರಿತ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಿಸುವ ಕುರಿತ ಹೇಳಿಕೆ ದೇಶಕ್ಕೆ ಹಾಗೂ ಸಂವಿಧಾನಕ್ಕೆ ಅಗೌರವ ತೋರಿಸುತ್ತಿರುವುದು ಕಳವಳಕಾರಿಯಾಗಿದೆ ಎಂದ ಅವರು, ಗ್ಯಾರಂಟಿ ಯೋಜನೆಗಳಿಗೆ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಗ್ಯಾರಂಟಿಯಿಂದ ಬಡ ಕುಟುಂಬಗಳ ಆರ್ಥಿಕ ಹಾಗೂ ಸ್ವಾವಲಂಬಿ ಬದುಕಿನ ಪ್ರಗತಿಗೆ ಮುನ್ನುಡಿಯಾಗಿದೆ. ಪಟ್ಟಣದಲ್ಲಿ ₹೨೦ ಕೋಟಿ ವೆಚ್ಚದಲ್ಲಿ ತಾಲೂಕಾಡಳಿತ ಸೌಧ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ₹ ೧೦ ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಶೀಘ್ರದಲ್ಲಿ ಆಗಲಿದೆ. ಗಜೇಂದ್ರಗಡದ ಸರ್ಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಸೌಕರ್ಯ ಒದಗಿಸಲಾಗುತ್ತಿದೆ. ಬಜೆಟ್ ಬಳಿಕ ೧೦೦ ಹಾಸಿಗೆ ಅಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲು ಶ್ರಮಿಸುವುದರ ಜತೆಗೆ ಬಡವರಿಗೆ ಇಂದಿರಾ ಕ್ಯಾಂಟೀನ್ ಹಾಗೂ ಮೂಲ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.
ತಹಸೀಲ್ದಾರ್ ಕಿರಣಮಾರ ಕುಲಕರ್ಣಿ, ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಲ್ಲಿ, ಸ್ಥಾಯಿ ಸಮಿತಿ ಚೇರಮನ್ ಮುದಿಯಪ್ಪ ಮುಧೋಳ, ಸದಸ್ಯರಾದ ಮುರ್ತುಜಾ ಡಾಲಾಯತ, ವೆಂಕಟೇಶ ಮುದಗಲ್, ರಾಜು ಸಾಂಗ್ಲಿಕರ, ದ್ರಾಕ್ಷಾಯಣಿ ಚೋಳಿನ, ವಿಜಯಾ ಮಲಗಿ, ಕೌಸರಬಾನು ಹುನಗುಂದ, ಶರಣಪ್ಪ ಉಪ್ಪಿನಬೆಟಗೇರಿ, ತಾಪಂ ಇಓ ಮಂಜುಳಾ ಹಕಾರಿ, ಪಿಎಸ್‌ಐ ಸೋಮನಗೌಡ ಗೌಡ್ರ, ಮುಖ್ಯಾಧಿಕಾರಿ ಬಸವರಾಜ ಬಳಗನೂರ, ಸಿದ್ದಣ್ಣ ಬಂಡಿ, ಶ್ರೀಧರ್ ಗಂಜಿಗೌಡ್ರ, ಶ್ರೀಧರ್ ಬಿದರಳ್ಳಿ, ವಿ.ಬಿ.ಸೋಮನಕಟ್ಟಿ, ರಾಠೋಡ, ಸಿದ್ದಪ್ಪ ಚೋಳಿನ ಸೇರಿ ಇತರರು ಇದ್ದರು.