)
ಕಾರಟಗಿ: ಕೋಟ್ಯಂತರ ಜನರ ಜೀವನಾಡಿ ತುಂಗಭದ್ರೆ ಜಲ ಇಂದು ಕುಡಿಯಲು ಯೋಗ್ಯ ಇಲ್ಲ ಎನ್ನುವ ಆತಂಕಕಾರಿ ಬೆಳವಣಿಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಯೋಜಕಿ ರಾಜಶ್ರೀ ಚೌಧರಿ ಹೇಳಿದರು.
ತುಂಗಾ ಪಾನ-ಗಂಗಾ ಸ್ನಾನ ಎಂಬ ಮಾತು ಎಲ್ಲೆಡೆ ಪ್ರಖ್ಯಾತಿ ಹೊಂದಿದೆ. ಆದರೆ, ಇಂದು ತುಂಗಭದ್ರಾ ಮಲೀನವಾಗುತ್ತಿದೆ. ಅದರ ನೀರು ಇಂದು ಕುಡಿಯಲು ಯೋಗ್ಯವಿಲ್ಲ. ಸಾರ್ವಜನಿಕರು ಬಿಡುವ ತ್ಯಾಜ್ಯ ಇಂದು ನದಿ ಮಾಲಿನ್ಯಕ್ಕೆ ಕಾರಣವಾಗಿವೆ. ಇದರಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದ ಜನರು ಗೊಬ್ಬರ, ಕ್ರಿಮಿನಾಶಕ ಬಳಸುತ್ತಾರೆ. ಇವರು ಬಿಡುವ ತ್ಯಾಜ್ಯವೆಲ್ಲ ನದಿ ಸೇರಿ ಇಂದು ಕುಡಿಯಲು ನೀರು ಯೋಗ್ಯವಿಲ್ಲ ಎನ್ನುವ ದುಸ್ಥಿತಿ ಬಂದಿದೆ. ಮುಂದೆ ಬಳಕೆಗೂ ದುರ್ಲಭವಾಗುವ ಎಲ್ಲ ಲಕ್ಷಣಗಳು ಇಂದೇ ಗೋಚರಿಸುತ್ತಿವೆ. ಕಲುಷಿತ ನೀರು ಕುಡಿದರೆ ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ, ಕಿಡ್ನಿ ಸಮಸ್ಯೆ ಸೇರಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಭೀತಿಯಿದೆ. ಸರ್ಕಾರ ಈಗಲಾದರೂ ನದಿ ನೀರಿನ ವಿಚಾರದಲ್ಲಿ, ಶುದ್ಧ ಗಾಳಿ ಒದಗಿಸುವ ನಿಟ್ಟಿನಲ್ಲಿ ನೀತಿ ರೂಪಿಸಿ ಜಾರಿಗೆ ತರಬೇಕು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭಿಯಾನದ ಪ್ರಧಾನ ಸಂಚಾಲಕ ಮಹಿಮಾ ಪಟೇಲ್ ಮಾತನಾಡಿ, ನದಿ ನೀರು ರಕ್ಷಣೆಗೆ ಭೇದ-ಭಾವವಿಲ್ಲದೆ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು. ಆಗಾದಾಗ ಮಾತ್ರ ಜೀವಸಂಕುಲದ ಉಳಿಯಲಿದೆ. ನದಿಗಳ ರಕ್ಷಣೆಗೆ ಇಂಥ ಅಭಿಯಾನದ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಮಾಜಿ ಶಾಸಕ ಬಸವರಾಜ ದಢೇಸೂಗೂರು, ಪ್ರಚಾರ ರಾಯಭಾರಿ ಲಲಿತಾರಾಣಿ ಶ್ರೀರಂಗದೇವರಾಯುಲು, ಆಂದೋಲನದ ಸಂಘಟನಾ ಮಂತ್ರಿ ಗಿರಿರಾಜ್ ಗುಪ್ತಾ, ಸಂಚಾಲಕ ಲೋಕೇಶ್ವರಪ್ಪ, ಆಂದೋಲನದ ದಕ್ಷಿಣ ಭಾರತ ಸಂಚಾಲಕ ಸಿ.ಪಿ. ಮಾಧವನ್ ಮಾತನಾಡಿದರು.
ಈ ವೇಳೆ ಮರುಳಸಿದ್ದಯ್ಯಸ್ವಾಮಿ ಹಿರೇಮಠ, ವೀರಭದ್ರ ಶರಣರು ತಲೇಖಾನ್ ಮಠ ಸಾನ್ನಿಧ್ಯ ವಹಿಸಿದ್ದರು.
ಅದ್ಧೂರಿ ನಡೆದ ಪಾದಯಾತ್ರೆ: ಪಟ್ಟಣದಲ್ಲಿ ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡ ನಾಗರಾಜ್ ತಂಗಡಗಿ ರಾಷ್ಟ್ರಧ್ವಜ ಬೀಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಪಾದಯಾತ್ರೆ ಕನಕದಾಸ ವೃತ್ತದ ಮೂಲಕ ರಾಜ್ಯ ಹೆದ್ದಾರಿ ಮೂಲಕ ಹಳೇ ಬಸ್ ನಿಲ್ದಾಣ, ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ಎಪಿಎಂಸಿ ತಲುಪಿ ಸಮಾರೋಪಗೊಂಡಿತು. ಪರಿಸರ ಪ್ರೇಮಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ನಾನಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ನೂರಾರು ಜನ ಶಿವಮೊಗ್ಗದಿಂದ ಆಗಮಿಸಿದ್ದ ಪಾದಯಾತ್ರಿಗಳ ಮೂಲಕ ಹೆಜ್ಜೆ ಹಾಕಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.