ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿಯಿಂದ ಶಾಸಕಿ ಕರೆಮ್ಮರಿಗೆ ಮನವಿ
ಕನ್ನಡಪ್ರಭ ವಾರ್ತೆ ದೇವದುರ್ಗಬಹುದಿನಗಳಿಂದ ಅರಣ್ಯ ಜಮೀನು ಸಾಗುವಳಿ ಮಾಡುತ್ತಿರುವ ರೈತರ ರಕ್ಷಣೆ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ ಶಾಸಕಿ ಕರೆಮ್ಮ.ಜಿ. ನಾಯಕರಿಗೆ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಅರಣ್ಯ ಕಾಯ್ದೆ 1963ರ ಸೆಕ್ಷನ್ 64 (ಎ) ರನ್ವಯ ರೈತರಿಗೆ ನೋಟಿಸ್ ಜಾರಿ ಮಾಡುವುದರ ಮೂಲಕ ಸಾಗುವಳಿ ರೈತರನ್ನು ಭೂಮಿಯಿಂದ ಹೊರಗೆ ಹಾಕುವ ತಂತ್ರ ಅರಣ್ಯ ಇಲಾಖಾಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅರಣ್ಯ ಒತ್ತುವರಿಗೆ ಮೂರು ಎಕರೆಗಿಂತ ಕಡಿಮೆ ಇರುವ ರೈತರನ್ನು ಪರಿಗಣಿಸಬಾರದೆಂದು ರಾಜ್ಯ ಸರ್ಕಾರ-2015ರ ಆದೇಶವಿದ್ದರು, ಅಧಿಕಾರಿಗಳು ಸರ್ಕಾರದ ಆದೇಶ ದಿಕ್ಕರಿಸಿದ್ದಾರೆ ಎಂದು ಆರೋಪಿಸಿದರು. ಗಲಗ, ಸೋಮನಮರಡಿ, ಬಿ.ಆರ್.ಗುಂಡ ಬೋಮ್ಮನಹಳ್ಳಿ, ಹೋಸುರು, ಸಿದ್ದಾಪುರ, ಬಸ್ಸಾಪುರ, ಬುಂಕಲದೊಡ್ಡಿ, ಮುಂಡರಗಿ, ಕೆ.ಇರಬಗೇರಾ, ಸೂಲದಗುಡ್ಡ, ಮಲಕಮದಿನ್ನಿ, ಕಾಚಾಪುರ, ಅನೇಕ ಗ್ರಾಮಗಳ ರೈತರ ಮೂರು ತಲೆಮಾರಿನಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಇದೀಗ, ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡುವದರ ಮೂಲಕ ರೈತರನ್ನು ಭೂಮಿಯಿಂದ ಹೊರ ಹಾಕುವ ತಂತ್ರ ಮಾಡುತ್ತಿರುವದರಿಂದ ಕ್ಷೇತ್ರದ ಶಾಸಕರು ರೈತರನ್ನು ರಕ್ಷಿಸಿ, ಅಧಿವೇಶನದಲ್ಲಿ ಚರ್ಚಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.ಸಾಗುವಳಿ ರೈತರು ಫಾರಂ ನಂ.53 & 57ರ ಅಡಿಯಲ್ಲಿ ಅರ್ಜಿಯನ್ನ ಹಾಕಿಕೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಗಡಿ ರೇಖೆ ಗುರುತಿಸಲು ತಾವಷ್ಟೇ ಮುಂದಾಗಿ ಸರ್ಕಾರದ ನಿಯಮ ಉಲ್ಲಂಘಿಸಿದ್ದಾರೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ಅಳತೆ ಮಾಡಲು ಸರ್ಕಾರದ ನಿಯಮವಿರುತ್ತದೆ. ಕಾನೂನು ಬಹಿರ ಅಳತೆ ತಡೆ ಹಿಡಿಯಬೇಕು.
ತಕ್ಷಣ ರೈತರಿಗೆ ರಕ್ಷಣೆ ನೀಡಿ, ಇಲಾಖೆಯಿಂದ ನೋಟಿಸ್ ನೀಡುವದನ್ನು ನಿಲ್ಲಿಸಬೇಕು, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಗಡಿ ಗುರುತಿಸಲು ಮುಂದಾಗಬೇಕು, ಇವುಗಳ ಕುರಿತು ರೈತರ ಪರವಾಗಿ ಅಧಿವೇಶನದಲ್ಲಿ ಚರ್ಚಿಸಿಬೇಕು ಎಂದರು. ಈ ವೇಳೆ ಮಲ್ಲಯ್ಯ ಕಟ್ಟಿಮನಿ, ಕೆ.ಗಿರಲಿಂಗ ಸ್ವಾಮಿ .ದುರಗಣ್ಣ ಇರಬಗೇರಾ .ಸೈಯದ್ ಅಬ್ಬಾಸಲಿ, ಸೇರಿ ಇತರರಿದ್ದರು.