ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ನ್ಯಾ.ಈಶ್ವರ್

KannadaprabhaNewsNetwork |  
Published : Aug 22, 2024, 12:47 AM IST
21ಸಿಎಚ್‌ಎನ್‌53ಚಾಮರಾಜನಗರ ತಾಲೂಕಿನ ಹೊಂಡರಬಾಳು ನವೋದಯ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಹಬ್ಬ ಮತ್ತು ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್‌  ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಾಮರಾಜನಗರ ಮಕ್ಕಳ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಕ್ಕಳ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಅವರು ತಿಳಿಸಿದರು. ತಾಲೂಕಿನ ಹೊಂಡರಬಾಳು ನವೋದಯ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ, ಹೊಂಡರಬಾಳು ಜವಾಹರ್ ನವೋದಯ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಹಬ್ಬ ಮತ್ತು ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಕ್ಕಳನ್ನು ಮೌಲ್ಯಯುತ ಶಿಕ್ಷಣ ನೀಡಿ ಬೆಳೆಸಬೇಕಿದೆ. ತಾಯಂದಿರಿಗೆ ಮಕ್ಕಳಿಗಿಂತ ದೊಡ್ಡ ಆಸ್ತಿ ಬೇರೊಂದಿಲ್ಲ. ಹೀಗಾಗಿ ಪೋಷಕರು ಸದಾ ಮಕ್ಕಳನ್ನು ಪ್ರೀತಿ, ಗೌರವದಿಂದ ಕಾಣಬೇಕು. ಎಳೆವಯಸ್ಸಿನಲ್ಲೇ ಮಕ್ಕಳಿಗೆ ಉನ್ನತ ಹುದ್ದೆಗೆ ಏರುವಂತಹ ಕನಸುಗಳನ್ನು ರೂಪಿಸಬೇಕು. ವಿದ್ಯಾರ್ಥಿಗಳು ಟಿ.ವಿ, ಮೊಬೈಲ್‌ಗಲಿಗೆ ದಾಸರಾಗದೆ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಭ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರಗಳಿಂದ ಮಹಿಳೆಯರಿಗೆ ಇಂದಿನ ಆಧುನಿಕ ಯುಗದಲ್ಲೂ ಅಭದ್ರತೆ ಕಾಡುತ್ತಿದೆ. ಲೈಂಗಿಕ ದೌರ್ಜನ್ಯ ಶಿಕ್ಷಾರ್ಹ ಅಪರಾಧ ಎಂದು ತಿಳಿದಿದ್ದರೂ ಅಪರಾಧಗಳಾಗುತ್ತಿವೆ. ಜನರಿಗೆ ಶಿಕ್ಷೆಯ ತೀವ್ರತೆಯ ಬಗ್ಗೆ ಅರಿವು ಇಲ್ಲವೇ ಎಂಬ ಸಂದೇಹ ಮೂಡುತ್ತದೆ ಎಂದರು.

ಫೋಕ್ಸೋ ಕಾಯ್ದೆ ಸೇರಿದಂತೆ ಮಕ್ಕಳ ರಕ್ಷಣೆಯ ಕಾನೂನಿನ ಬಗ್ಗೆ ಸಾರ್ವಜನಿಕರು, ಪೋಷಕರು, ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ನಡೆಸಬೇಕು. ಮಕ್ಕಳು ತಮಗೆ ಸಮಸ್ಯೆ ಆದಾಗ ಮಕ್ಕಳ ಸಹಾಯವಾಣಿ (1098) ಕರೆಮಾಡಿ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್ ಅವರು ಮಾತನಾಡಿ, ಬೇಟಿ ಬಚಾವೋ ಬೇಟಿ ಪಡಾವೋ ಎಂಬುದು ಒಂದು ಜಾಗೃತಿ ಅಭಿಯಾನವಾಗಿದೆ. ಹೆಣ್ಣು ಮಕ್ಕಳನ್ನು ಉಳಿಸುವುದು ಮತ್ತು ಅವರಿಗೆ ಶಿಕ್ಷಣ ನೀಡುವುದು ಇದರ ಮುಖ್ಯ ಉದ್ದೇಶ. ಹೆಣ್ಣು ಭ್ರೂಣಹತ್ಯೆ ತಡೆಯಬೇಕು, ಹೆಣ್ಣುಮಕ್ಕಳ ಮೇಲಿನ ಶೋಷಣೆಗೆ ಕಡಿವಾಣ ಹಾಕಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ ಎಂದರು.

ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯ ಟಿ.ಜೆ. ಸುರೇಶ್ ಮಾತನಾಡಿ, ಎಲ್ಲಿಯವರೆಗೆ ಹೆಣ್ಣು ಭ್ರೂಣಹತ್ಯೆ ಮಹಾಪಾಪ ಎಂದು ತಾಯಿಯಂದಿರಲ್ಲಿ ಅರಿವು ಮೂಡುವುದಿಲ್ಲವೋ ಅಲ್ಲಿಯವರೆಗೆ ಲಿಂಗಾನುಪಾತದಲ್ಲಿ ಸುಧಾರಣೆ ಸಾಧ್ಯವಿಲ್ಲ. ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗಪತ್ತೆ ಮಾಡುವುದು ಹಾಗೂ ಹೆಣ್ಣುಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರು. ದಂಡ ವಿಧಿಸಲಾಗುತ್ತದೆ ಎಂದರು. ಜವಾಹರ್ ನವೋದಯ ಶಾಲೆಯ ಪ್ರಾಂಶುಪಾಲರಾದ ಪ್ರೀತಾಜೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಇಲಾಖೆಯ ಅಧಿಕಾರಿ ಲಕ್ಷ್ಮಿಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ದಿನೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿದ್ದಶೆಟ್ಟಿ, ಕೃಷ್ಣಪ್ರಸಾದ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 21ಸಿಎಚ್‌ಎನ್‌53

ಚಾಮರಾಜನಗರ ತಾಲೂಕಿನ ಹೊಂಡರಬಾಳು ನವೋದಯ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಹಬ್ಬ ಮತ್ತು ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್‌ ಉದ್ಘಾಟಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ