ಮಾನವ ಹಕ್ಕುಗಳ ಸಂರಕ್ಷಣೆ ಸರ್ಕಾರದ ಆದ್ಯ ಕರ್ತವ್ಯ: ಟಿ.ಶ್ಯಾಮ್ ಭಟ್

KannadaprabhaNewsNetwork |  
Published : Nov 20, 2025, 12:15 AM IST
ಪೊಟೋ: 19ಎಸ್ಎಂಜಿಕೆಪಿ06ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣ ವಿಲೇವಾರಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಮಾತನಾಡಿದರು. | Kannada Prabha

ಸಾರಾಂಶ

ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಹಾಗೂ ಜನರು ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಹಾಗೂ ಜನರು ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ತಿಳಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣ ವಿಲೇವಾರಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಈಗಾಗಲೇ 24 ಜಿಲ್ಲೆಗಳಲ್ಲಿ ವಿಚಾರಣೆ ನಡೆಸಿದ್ದು, ಇನ್ನು 8 ಜಿಲ್ಲೆಗಳು ಬಾಕಿ ಇದೆ ಎಂದರು.

ಮಾನವ ಹಕ್ಕುಗಳ ಸಂರಕ್ಷಣೆ ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಆಯೋಗವು ಸರ್ಕಾರ/ಸರ್ಕಾರಿ ಸಂಸ್ಥೆಗಳಿಂದ ಆಗಿರುವ ಮಾನವ ಹಕ್ಕುಗಳ ಕುರಿತಾದ ದೂರನ್ನು ಸ್ವೀಕರಿಸಿ, ವಿಚಾರಣೆ ನಡೆಸಿ, ತೀರ್ಮಾನ ಕೈಗೊಂಡು ಶಿಸ್ತಿನ ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಹಾಗೂ ಕೆಲವು ಪ್ರಕರಣಗಳಲ್ಲಿ ದೂರುದಾರರು, ನೊಂದವರಿಗೆ ಪರಿಹಾರ ನೀಡಲು ಶಿಫಾರಸು ಮಾಡುತ್ತದೆ ಎಂದರು.

ಮಾನವ ಹಕ್ಕುಗಳ ವ್ಯಾಪ್ತಿ ಅತಿ ವಿಸ್ತಾರವಾಗಿರುವುದರಿಂದ ದೂರುಗಳ ಸಂಖ್ಯೆ ಸಹ ಹೆಚ್ಚಿದೆ. ಆದ್ದರಿಂದ ಜಿಲ್ಲೆಗಳಿಂದ ವಾಸ್ತವಿಕ ವರದಿಗಳನ್ನು ಬೇಗ ಕಳುಹಿಸಿದರೆ ಶೀಘ್ರ ವಿಲೇವಾರಿ ಸಾಧ್ಯವಾಗುತ್ತದೆ. ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡಿದ ಸಮಯದಲ್ಲಿ ಅಧಿಕಾರಿ/ಸಿಬ್ಬಂದಿ ಸೌಜನ್ಯದಿಂದ ಮಾತನಾಡಿದರೆ ಶೇ.50 ಸಮಸ್ಯೆ ಬಗೆಹರಿಯುತ್ತದೆ ಎಂದ ಅವರು, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಮೆಗ್ಗಾನ್ ಆಸ್ಪತ್ರೆ ಭೇಟಿ ಸಮಯದಲ್ಲಿ ರೋಗಿ ಜೊತೆ ಇರುವ ಸಹಾಯಕರಿಗೆ ರಾತ್ರಿ ತಂಗಲು ಡಾರ್ಮಿಟರಿ ಅವಶ್ಯವಿದೆ ಎಂದು ಸಾರ್ವಜನಿಕರು ತಿಳಿಸಿದ್ದು, ಈ ಕುರಿತು ಚರ್ಚಿಸಲಾಗಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಶೀಘ್ರದಲ್ಲೇ ರು.5 ಕೋಟಿ ಅನುದಾನದಲ್ಲಿ ಡಾರ್ಮಿಟರಿ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಜಿಲ್ಲಾ ಕಾರಾಗೃಹಕ್ಕೆ ಖೈದಿಗಳ ಬಂಧುಗಳು ಭೇಟಿ ನೀಡಲು ಬಸ್ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಕೇಳಿಕೊಂಡಿದ್ದು, ಕೆಎಸ್‌ಆರ್‌ಟಿಸಿ ವತಿಯಿಂದ ಖೈದಿಗಳ ಭೇಟಿ ಸಮಯದಲ್ಲಿ ಒಂದು ಬಸ್ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.

ಮಾನವ ಹಕ್ಕು ಹೋರಾಟ ಸಮಿತಿ, ಮಾನವ ಹಕ್ಕುಗಳ ಸಂಘ ಹೀಗೆ ಮಾನವ ಹಕ್ಕುಗಳ ಹೆಸರಿನ ನಕಲಿ ಸಂಸ್ಥೆಗಳು ಅಧಿಕಾರಿಗಳನ್ನು ಹೆದರಿಸಿ ಕೆಲಸ ಮಾಡಿಸುತ್ತಿವೆ. ಈ ಬಗ್ಗೆ ಅಧಿಕಾರಿಗಳು, ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಮಾತನಾಡಿ, ಮಾನವನಿಗೆ ಜನ್ಮತಃ ಬಂದ ಹಕ್ಕುಗಳೇ ಮಾನವ ಹಕ್ಕುಗಳಾಗಿದ್ದು, ಮೂಲಭೂತ ಹಕ್ಕೂಗಳೂ ಸೇರಿದಂತೆ ಇದರ ವ್ಯಾಪ್ತಿ ವಿಸ್ತಾರವಾಗಿದೆ. ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವುದು, ಉಲ್ಲಂಘನೆಯಾದಲ್ಲಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುವುದು ಆಯೋಗದ ಕಾರ್ಯವಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ. ಸಿಇಓ ಹೇಮಂತ್ ಎನ್, ಎಎಸ್ ಪಿ ಕಾರಿಯಪ್ಪ, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ದೂರುದಾರರು ಹಾಜರಿದ್ದರು.

ಶೀಘ್ರ ವರದಿಗೆ ಆಯೋಗ ಸೂಚನೆ: ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದ 26 ಪ್ರಕರಣ, ಎಸ್‌ಪಿಯವರಿಗೆ ಸಂಬಂಧಿಸಿದ 10, ಕೇಂದ್ರ ಕಾರಾಗೃಹ 4 , ಜಿ.ಪಂ ಸಿಇಓಯವರಿಗೆ ಸಂಬಂಧಿಸಿದ 03, ಡಿಡಿಪಿಐಗೆ ಸಂಬಂಧಿಸಿದ 2 ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಬಾಕಿ ಇದ್ದ 50 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ವರದಿ ಸಲ್ಲಿಸದೇ ಇರುವ ಪ್ರಕರಣಗಳಿಗೆ ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಆಯೋಗ ಸೂಚನೆ ನೀಡಿತು.

-----

ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದು, ತಾವು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಚತೆ, ಇತರೆ ಸೌಲಭ್ಯ ಉತ್ತಮವಾಗಿದ್ದು ಸಿಬ್ಬಂದಿ ಕೊರತೆ ಇಲ್ಲ. ಸರ್ಕಾರಿ ವಿದ್ಯಾರ್ಥಿ ನಿಲಯಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕಾರಾಗೃಹ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಣ್ಣ ಪುಟ್ಟ ದೋಷಗಳಿದ್ದು ಅವುಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ.

- ಶ್ಯಾಮ್ ಭಟ್, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ

PREV

Recommended Stories

ಹೆಣ್ಣುಮಕ್ಕಳು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ
ಮಕ್ಕಳ ಭವಿಷ್ಯದ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಪೂರಕ: ಗಣಪತಿ ಹುಲ್ತಿಕೊಪ್ಪ