ಪಪಂ ವ್ಯಾಪ್ತಿ ಕೆರೆಗಳ ರಕ್ಷಣೆ, ಇ-ತ್ಯಾಜ್ಯಕ್ಕೆ ಪರಿಹಾರ ಕಂಡುಕೊಳ್ಳಿ

KannadaprabhaNewsNetwork | Published : Feb 3, 2024 1:49 AM

ಸಾರಾಂಶ

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ರಕ್ಷಣೆ ಮಾಡುವ ಮೂಲಕ ಜಲಮೂಲವನ್ನು ರಕ್ಷಿಸಲು ಆದ್ಯತೆ ನೀಡಬೇಕು. ತ್ಯಾಜ್ಯ ಸಂಗ್ರಹ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇ-ತ್ಯಾಜ್ಯ ವ್ಯವಸ್ಥಿತ ವಿಲೇವಾರಿಗೆ ಆದ್ಯತೆ ನೀಡುವುದು ಸೂಕ್ತ ಎಂದು ಪ.ಪಂ.ಯಲ್ಲಿ ಗುರುವಾರ ಅಧ್ಯಕ್ಷೆ ಗೀತಾ ರಮೇಶ್ ಅಧ್ಯಕ್ಷತೆ ನಡೆದ ಬಜೆಟ್ ಪೂರ್ವ ಸಮಾಲೋಚನೆ ಸಭೆಯಲ್ಲಿ ಸಾರ್ವಜನಿಕರು ಸಲಹೆ, ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ:

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ರಕ್ಷಣೆ ಮಾಡುವ ಮೂಲಕ ಜಲಮೂಲವನ್ನು ರಕ್ಷಿಸಲು ಆದ್ಯತೆ ನೀಡಬೇಕು. ತ್ಯಾಜ್ಯ ಸಂಗ್ರಹ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇ-ತ್ಯಾಜ್ಯ ವ್ಯವಸ್ಥಿತ ವಿಲೇವಾರಿಗೆ ಆದ್ಯತೆ ನೀಡುವುದು ಸೂಕ್ತ ಎಂದು ಗುರುವಾರ ಪ.ಪಂ.ಯಲ್ಲಿ ನಡೆದ ಬಜೆಟ್ ಪೂರ್ವ ಸಮಾಲೋಚನೆ ಸಭೆಯಲ್ಲಿ ಸಾರ್ವಜನಿಕರು ಸಲಹೆ ನೀಡಿದರು. ಪ.ಪಂ. ಅಧ್ಯಕ್ಷೆ ಗೀತಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ 2024- 25ನೇ ಸಾಲಿನ ಮುಂಗಡ ಪತ್ರ ಮಂಡನೆಗೆ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಸಲುವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಜಲಮೂಲದ ರಕ್ಷಣೆ ಸಲುವಾಗಿ ಪಟ್ಟಣ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ನಿಯಂತ್ರಿಸಿ, ಅವುಗಳನ್ನು ಶುದ್ಧೀಕರಿಸುವ ಅಗತ್ಯವಿದೆ ಎಂದರು.

ಪಟ್ಟಣದ ಹೃದಯ ಭಾಗದ ಟಿಎಪಿಸಿಎಂಎಸ್ ರಸ್ತೆಯ ಶೌಚಾಲಯ ಸೇರಿದಂತೆ ಕೆಲವು ಶೌಚಾಲಯಗಳು ಹೇಸಿಗೆ ಹುಟ್ಟಿಸುವಂತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಪಟ್ಟಣದ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ ಹೆಚ್ಚುತ್ತಿರುವ ಹಿನ್ನೆಲೆ ಇ-ತ್ಯಾಜ್ಯ ವ್ಯವಸ್ಥೆಗೆ ಆದ್ಯತೆ ನೀಡುವುದು ಸೂಕ್ತ. ಪಟ್ಟಣದ ಸೌಂದರ್ಯ ಹೆಚ್ಚಿಸಲು ಇರುವ ಗಿಡಗಳನ್ನು ರಕ್ಷಣೆ ಮಾಡುವುದರೊಂದಿಗೆ ಹೆಚ್ಚು ಗಿಡಗಳನ್ನು ಬೆಳೆಸಬೇಕು ಎಂದೂ ಸಲಹೆ ನೀಡಿದರು.

ಲೈಸೆನ್ಸ್ ನವೀಕರಣ ಸರಳೀಕರಿಸಬೇಕು. ಬೀದಿ ವ್ಯಾಪಾರಿಗಳಿಂದಾಗಿ ಅಂಗಡಿ ನಡೆಸುತ್ತಿರುವವರು ನಷ್ಟ ಅನುಭವಿಸುವಂತಾಗಿದೆ. ಅಂಗಡಿ ಮಾಲೀಕರು ಫುಟ್‍ಪಾತ್‍ಗಳ ಮೇಲೆ ತಮ್ಮ ಸರಕುಗಳನ್ನು ಇಟ್ಟುಕೊಂಡಿರುವ ಕಾರಣ, ಪಾದಾಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದೆ. ಇದರ ನಿಯಂತ್ರಣ ಅಗತ್ಯ. ಓದುವ ಹವ್ಯಾಸಕ್ಕೆ ಉತ್ತೇಜನ ನೀಡಲು ಪಟ್ಟಣದ ನಾಲ್ಕೂ ದಿಕ್ಕಿನಲ್ಲಿ ಗ್ರಂಥಾಲಯ ಸ್ಥಾಪಿಸುವುದಲ್ಲದೇ, ಪಟ್ಟಣ ಪ್ರವೇಶ ದ್ವಾರಕ್ಕೆ ಕುವೆಂಪು ಹೆಸರಿಡುವಂತೆಯೂ ಆಗ್ರಹಿಸಲಾಗಿದೆ.

ಪಪಂ ಅಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಸಾರ್ವಜನಿಕರ ಅಭಿಪ್ರಾಯವನ್ನು ಕ್ರೋಢೀಕರಿಸಿ ಆದ್ಯತೆಯ ಮೇಲೆ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದರು.

ಸಭೆಯಲ್ಲಿ ಬಿ.ಎನ್. ಕೃಷ್ಣಮೂರ್ತಿ ಭಟ್, ವೆಂಕಟೇಶ್ ಪಟವರ್ಧನ್, ನಾಗರಾಜ ಗೌಡ, ಭರತ್, ಟಿ.ಎಲ್. ಸುಂದರೇಶ್, ಕೊಪ್ಪಲು ರಾಮಚಂದ್ರ ಮುಂತಾದವರು ಸಲಹೆ ನೀಡಿದರು.

ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಸದಸ್ಯರಾದ ಸಂದೇಶ್ ಜವಳಿ, ಸುಶೀಲಾ ಶೆಟ್ಟಿ, ಶಬನಂ, ರತ್ನಾಕರ ಶೆಟ್ಟಿ, ಸೊಪ್ಪುಗುಡ್ಡೆ ರಾಘವೇಂದ್ರ, ಜಯಪ್ರಕಾಶ್ ಶೆಟ್ಟಿ, ಜ್ಯೋತಿ ಮೋಹನ್ ಹಾಗೂ ಮುಖ್ಯಾಧಿಕಾರಿ ಕುರಿಯಾ ಕೋಸ್ ಇದ್ದರು.

- - - -01ಟಿಟಿಎಚ್02:

ತೀರ್ಥಹಳ್ಳಿ ಪ.ಪಂ.ಯಲ್ಲಿ ಗುರುವಾರ ಬಜೆಟ್ ಪೂರ್ವ ಸಮಾಲೋಚನೆ ಸಭೆ ನಡೆಯಿತು.

Share this article