ಪದ್ಧತಿ ಪರಂಪರೆ ಆಚರಣೆಯಿಂದ ಜನಾಂಗದ ರಕ್ಷಣೆ: ಎ.ಎಸ್.ಪೊನ್ನಣ್ಣ

KannadaprabhaNewsNetwork |  
Published : Aug 10, 2025, 02:17 AM IST
ಪೊನ್ನಣ್ಣ | Kannada Prabha

ಸಾರಾಂಶ

ಪೂರ್ವಜರು ಬಿಟ್ಟು ಹೋದ ಪದ್ಧತಿ ಪರಂಪರೆಯನ್ನು ರಕ್ಷಣೆ ಮಾಡಿದರಷ್ಟೇ ಜನಾಂಗದ ರಕ್ಷಣೆ ಮಾಡಲು ಸಾಧ್ಯ ಎಂದು ಶಾಸಕ ಪೊನ್ನಣ್ಣ ಹೇಳಿದರು.

ದುಗ್ಗಳ ಸದಾನಂದ. ಕನ್ನಡಪ್ರಭ ವಾರ್ತೆ ನಾಪೋಕ್ಲು

ಪೂರ್ವಜರು ಬಿಟ್ಟುಹೋದ ಪದ್ಧತಿ ಪರಂಪರೆಯನ್ನು ಆಚರಣೆ ಮಾಡಿದರಷ್ಟೇ ಜನಾಂಗದ ರಕ್ಷಣೆ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಹಾಗೂ ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ, ಮನೋರಂಜನಾ ಕೂಟ, ಬಿದ್ದಾಟಂಡ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಇಲ್ಲಿನ ಬಿದ್ದಾಟಂಡ ಕುಟುಂಬಸ್ಥರ (ಬುಟ್ಟಿ ಯಾಕ ಬೇಲ್) ಗದ್ದೆಯಲ್ಲಿ ಆಯೋಜಿಸಲಾಗಿದ್ದ ಐಪಣಿರ ಆಯಿಮೆ ಪಿಞ್ಞ ಕಳಿ ಪೈಪೋಟಿ (ಬೇಲ್ ನಮ್ಮೆ) ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.ಕಡೆಗಣಿಸುವುದು ಸರಿಯಲ್ಲ:

ಸಂಘ ಸಂಸ್ಥೆ ಅಕಾಡೆಮಿಗಳು ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದರೆ ಖಂಡಿತವಾಗಿ ಸಾಹಿತ್ಯ ಸಂಸ್ಕೃತಿ ಉಡುಪು ಆಚಾರ ವಿಚಾರ ಉಳಿಯಲು ಸಾಧ್ಯ. ಕೊಡವ ಸಂಸ್ಕೃತಿ ಸಂಪ್ರದಾಯ ಆಚರಣೆಯನ್ನು ಪ್ರಪಂಚದ ಪ್ರತಿಯೊಬ್ಬರೂ ಗೌರವಿಸುತ್ತಿದ್ದು ನಾವು ಇದನ್ನು ಕಡೆಗಣಿಸುವುದು ಸರಿಯಲ್ಲ. ನಮ್ಮ ಪದ್ಧತಿ ಪರಂಪರೆ ಆಚಾರ-ವಿಚಾರಗಳನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗಿನಲ್ಲಿ ಕೃಷಿ ಚಟುವಟಿಕೆಗಳು ಪೂರ್ಣಗೊಂಡ ಬಳಿಕ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುವುದು. ಕೃಷಿ ಚಟುವಟಿಕೆಗಳಿಗೆ ಇನ್ನಷ್ಟು ಸಡಗರ ಸಂಭ್ರಮ ತುಂಬಿಕೊಳ್ಳಲು ಕಕ್ಕಡ 18 ಕ್ಕೆ ಪೂರಕವಾಗಿ ಬೇಲ್ ನಮ್ಮೆಯನ್ನು ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೇಲ್ ನಮ್ಮೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಗಿದೆ. ಕೂಡು ನಾಟಿ , ನಾಟಿ ಓಟದಂತಹ ಚಟುವಟಿಕೆಗಳು ಜೊತೆಯಲ್ಲಿ ಕೃಷಿಗೆ ಪೂರಕವಾದ ಆಟೋಟಗಳನ್ನು ಹಮ್ಮಿಕೊಂಡು ಬದುಕಿನ ಆಧಾರ ಕೃಷಿ ಆಗಿದ್ದು ಅದನ್ನು ಉತ್ತೇಜಿಸಿ ಕೃಷಿಯಾಧಾರಿತ ಬದುಕಿನಲ್ಲಿ ಯುವಜನರನ್ನು ತೊಡಗಿಸಿಕೊಳ್ಳುಲು ಉತ್ತೇಜನ ನೀಡಲಾಗುತ್ತಿದೆ ಎಂದರು. ಇಲ್ಲಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್ ಬತ್ತದ ಸಸಿ (ಅಗೆ ) ತೆಗೆಯುವುದರ ಮೂಲಕ (ಐಪಣಿ) ಕ್ರೀಡಾಕೂಟಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.ವೈವಿಧ್ಯಮಯ ಸ್ಪರ್ಧೆ:

ಬಳಿಕ ಸಾರ್ವಜನಿಕರನ್ನು ಒಳಗೊಂಡಂತೆ ಪ್ರಾಥಮಿಕ ಪ್ರೌಢಶಾಲೆ ಹಾಗೂ ಕಾಲೇಜು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಬತ್ತದ ಸಸಿ ತೆಗೆಯುವುದು ಹಾಗೂ ನಾಟಿ ಪೈಪೋಟಿ ಸೇರಿದಂತೆ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಯಿತು..ಈ ಸಂದರ್ಭ ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ, ಮನೋರಂಜನಾ ಕೂಟದ ಅಧ್ಯಕ್ಷ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ಯಸ್. ತಮ್ಮಯ್ಯ, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ನಿರ್ದೇಶಕ ಸದಸ್ಯರು, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಚಮಂಡಲ ಲವ ಚಿನ್ನಪ್ಪ, ಕಾರ್ಯದರ್ಶಿ ಚೇಕ್ ಪೂವಂಡ ಅಪ್ಪಚ್ಚು, ನಿರ್ದೇಶಕ ಸದಸ್ಯರು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಸದಸ್ಯರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪದಾಧಿಕಾರಿ, ನಿರ್ದೇಶಕರು, ಹಾಗೂ ಸಿಬ್ಬಂದಿ, ಶಿವಚಾಳಿಯಂಡ ಅಂಬಿ , ಬಿದ್ದಾಟಂಡ ಕುಟುಂಬದ ಹಿರಿಯರಾದ ಡಿಕ್ಕಿ ಸೋಮಯ್ಯ, ಬಿದ್ದಾಟಂಡ ಕಾರ್ಯಪ್ಪ ಮತ್ತು ಕುಟುಂಬಸ್ಥರು , ಅಕಾಡೆಮಿಯ ರಿಜಿಸ್ಟರ್ಡ್ ಚಿನ್ನಸ್ವಾಮಿ, ಮುಕ್ಕಾಟಿರ ಸೂತನ್ ಸುಬ್ಬಯ್ಯ, ಕಲಿಯಂಡ ಸಂಪನ್ ಅಯ್ಯಪ್ಪ, ಕುಡಿಯರ ಮುತ್ತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಅಕಾಡೆಮಿ ನಿರ್ದೇಶಕ ರಾದ ಚೆಪ್ಪುಡಿರ ಉತ್ತಪ್ಪನವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಮಾಲೇಟೀರಾ ಶ್ರೀನಿವಾಸ್ ಕಾರ್ಯಕ್ರಮವನ್ನು ನಿರೂಪಿಸಿ ಪೊನ್ನೀರ ಗಗನ್ ವಂದಿಸಿದರು.ಸಂಜೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ