ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯನ್ನು ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಬಜೆಟ್‌ನಲ್ಲಿ ಅನ್ಯಾಯ ಮಾಡುತ್ತಿದ್ದರೂ, ಧ್ವನಿ ಎತ್ತಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜನ ಪ್ರತಿನಿಧಿಗಳು ಕೋಮಾಸ್ಥಿತಿಯಲ್ಲಿರುವ ರೋಗಿಯಂತಾಗಿದೆ.
ಕನ್ನಡಪ್ರಭ ವಾರ್ತೆ ಕೋಲಾರ
ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 50 ಸಾವಿರ ಕೋಟಿ ಅನುದಾನ ನೀಡುವ ಜೊತೆಗೆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ರೈತ ಸಂಘದಿಂದ ಮೆಕ್ಕೆ ಸರ್ಕಲ್‌ನಲ್ಲಿ ತರಕಾರಿ ಸಮೇತ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯನ್ನು ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಬಜೆಟ್‌ನಲ್ಲಿ ಅನ್ಯಾಯ ಮಾಡುತ್ತಿದ್ದರೂ, ಧ್ವನಿ ಎತ್ತಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜನ ಪ್ರತಿನಿಧಿಗಳು ಕೋಮಾಸ್ಥಿತಿಯಲ್ಲಿರುವ ರೋಗಿಯಂತಾಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ ಬಹುದಿನಗಳ ಕನಸಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಕೃಷಿಯಾಧಾರಿತ ಕೈಗಾರಿಕೆಗಳು ಮಾವು ಸಂಸ್ಕೃಕರಣ ಘಟಕಗಳ ಸ್ಥಾಪನೆಯ ಜೊತೆಗೆ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಜಾರಿ ಮಾಡಿ ಕೆ.ಸಿ. ವ್ಯಾಲಿ 3ನೇ ಹಂತದ ಶುದ್ಧೀಕರಣ ಮಾಡುವ ಜೊತೆಗೆ ರೈತರ ಜೀವನದ ಜೊತೆ ಚೆಲ್ಲಾಟವಾಡುವ ನಕಲಿ ಬಿತ್ತನೆ ಬೀಜ, ಕೀಟನಾಶಕ ಹಾಗೂ ಅನಧಿಕೃತ ನರ್ಸರಿಗಳ ಹಾವಳಿಗೆ ಕಡಿವಾಣ ಹಾಕಲು ಬಜೆಟ್‌ನಲ್ಲಿ ವಿಶೇಷ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಈಶಂಬಳ್ಳಿ ಮಂಜುನಾಥ ಮಾತನಾಡಿ, ಏಷ್ಯಾದಲ್ಲಿ 2ನೇ ಅತಿದೊಡ್ಡ ಮಾರುಕಟ್ಟೆಯೆಂದು ಪ್ರಸಿದ್ಧಿ ಪಡೆದಿರುವ ಟೊಮೋಟೊ ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಲು ಸರ್ಕಾರದ ಮಟ್ಟದಲ್ಲಿರುವ 100 ಎಕರೆ ಜಮೀನಿನ ಕಡತಕ್ಕೆ ಮುಕ್ತಿ ನೀಡಿ ಅಭಿವೃದ್ಧಿ ಮಾಡಲು 100 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಸ್ಥಗಿತವಾಗಿರುವ ಕೃಷಿ ಹಾಗೂ ಪಶುಭಾಗ್ಯ ಯೋಜನೆಯನ್ನು ಜಾರಿ ಮಾಡಬೇಕು. ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸರ್ಕಾರ ನೀಡುತ್ತಿದ್ದ ಬೆಸ್ಕಾಂ ಇಲಾಖೆಯಲ್ಲಿನ ಅನುದಾನವನ್ನು ಮತ್ತೆ ಪ್ರಾರಂಭ ಮಾಡಿ ಗಡಿಭಾಗದ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಆನೆ ಕಾರಿಡಾರ್ ಸ್ಥಾಪನೆ ಮಾಡಲು 10 ಸಾವಿರ ಕೋಟಿ ಅನುದಾನ ಮೀಸಲಿಡಬೇಕು. ಕಾಡಾನೆಗಳ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ 1 ಕೋಟಿ ಪರಿಹಾರ, ಬೆಳೆ ನಾಶವಾದರೆ 25 ಲಕ್ಷ ಪರಿಹಾರ ನೀಡುವ ಕಾನೂನು ಜಾರಿ ಮಾಡಬೇಕೆಂದು ಆಗ್ರಹಿಸಿದರು.ರಸ್ತೆ, ಕೈಗಾರಿಕೆ, ಅಭಿವೃದ್ಧಿಗೆ ಕೃಷಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪ್ರತಿ ಎಕರೆಗೆ 5 ಕೋಟಿ ಪರಿಹಾರ ನೀಡಿ. ಇಲ್ಲವೆ ಪರ್ಯಾಯವಾಗಿ ಪ್ರತಿ ಎಕರೆಗೆ 5 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ನೀಡುವ ಕಾನೂನು ಜಾರಿ ಮಾಡಿ ಕೆರೆ ಹಾಗೂ ಸರ್ಕಾರಿ ಆಸ್ತಿಗಳನ್ನು ಕಬಳಿಸುವ ಭೂಗಳ್ಳರ ಮೇಲೆ ಕ್ರಮ ಕೈಗೊಳ್ಳಲು ಸ್ಥಗಿತವಾಗಿರುವ ಭೂ ಕಬಳಿಕೆ ನ್ಯಾಯಾಲಯಕ್ಕೆ ಮರುಜೀವ ನೀಡಬೇಕೆಂದು ಮನವಿ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತಾನಾಡಿದ ಕಂದಾಯ ಅಧಿಕಾರಿಗಳು ಜಿಲ್ಲೆಯ ರೈತಪರವಾದ ಬೇಡಿಕೆಗಳ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಕಳುಹಿಸುವ ಭರವಸೆಯನ್ನು ನೀಡಿದರು.ಈ ವೇಳೆ ರಾಮು, ಬಂಗವಾದಿ ನಾಗರಾಜಗೌಡ, ವಕ್ಕಲೇರಿ ಹನುಮಯ್ಯ, ಚಂದ್ರಪ್ಪ, ತಿಮ್ಮಣ್ಣ, ಗೋವಿಂದಪ್ಪ, ಕುವಣ್ಣ, ವೆಂಕಟೇಶಪ್ಪ, ಸುಪ್ರೀಂಚಲ, ರಾಜೇಶ್, ಪಾರುಕ್, ಹೆಬ್ಬಣಿ ಆನಂದರೆಡ್ಡಿ ವೆಂಕಟೇಶ್, ಯಲ್ಲಣ್ಣ, ಹರೀಶ್, ರಾಮಸಾಗರ ವೇಣು, ಬಾಬು, ಕಮ್ಮದಟ್ಟಿ ಚಲಪತಿ, ಮಂಜುನಾಥ. ದೇವರಾಜ, ಶೈಲಜ, ರತ್ನಮ್ಮ, ನಯನ, ಗೌರಮ್ಮ, ಪದ್ಮಮ್ಮ. ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.