ವಕ್ಫ್‌ ಕಾಯ್ದೆ ತಿದ್ದುಪಡಿಗೆ ವಿರೋಧ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ

KannadaprabhaNewsNetwork |  
Published : Apr 22, 2025, 01:47 AM IST
ಪೋಟೊ-೨೧ ಎಸ್.ಎಚ್.ಟಿ. ೧ಕೆ-ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಬೇಕು. ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮಾಜದವರು ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸಂಸತ್ತಿನಲ್ಲಿ ಅಂಗೀಕರಿಸಲಾದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸುವಂತೆ (ಹಿಂಪಡೆಯುವಂತೆ) ಆಗ್ರಹಿಸಿ ಮತ್ತು ಪ್ರವಾದಿ ಮಹಮ್ಮದ ಪೈಗಂಬರ್ ಕುರಿತು ಅವಹೇಳನಕಾರಿ ಮಾತನಾಡಿರುವ ಕೋಮುವಾದಿ ಬಸನಗೌಡ ಪಾಟೀಲ್ ಯತ್ನಾಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಹಜರತ್ ಟಿಪ್ಪುಸುಲ್ತಾನ್ ವೃತ್ತದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಶಿರಹಟ್ಟಿ: ಸಂಸತ್ತಿನಲ್ಲಿ ಅಂಗೀಕರಿಸಲಾದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸುವಂತೆ (ಹಿಂಪಡೆಯುವಂತೆ) ಆಗ್ರಹಿಸಿ ಮತ್ತು ಪ್ರವಾದಿ ಮಹಮ್ಮದ ಪೈಗಂಬರ್ ಕುರಿತು ಅವಹೇಳನಕಾರಿ ಮಾತನಾಡಿರುವ ಕೋಮುವಾದಿ ಬಸನಗೌಡ ಪಾಟೀಲ್ ಯತ್ನಾಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಹಜರತ್ ಟಿಪ್ಪುಸುಲ್ತಾನ್ ವೃತ್ತದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಮಹಿಳೆಯರು ಮೆರವಣಿಗೆಯುದ್ದಕ್ಕೂ ಶಾಸಕ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಸತ್ತಿನಲ್ಲಿ ಅಂಗೀಕರಿಸಲಾದ ವಕ್ಫ್ ತಿದ್ದುಪಡಿ ಮಸೂದೆಯು ಸಂವಿಧಾನ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ಮುಖಂಡ ಹುಮಾಯೂನ್ ಮಾಗಡಿ, ಅನ್ವರ್ ಬಾಗೇವಾಡಿ ಮಾತನಾಡಿ, ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಸಂಚು ರೂಪಿಸುವ ಉದ್ದೇಶದಿಂದ ಕೂಡಿದೆ. ಕೇಂದ್ರದ ಈ ಸಂವಿಧಾನ ವಿರೋಧಿ ತಿದ್ದುಪಡಿಯ ವಿರುದ್ಧ ದೇಶಾದ್ಯಂತ ಪ್ರಬಲ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟಿನ ಪೂರಕ ನಿರ್ಣಯದ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಹೋರಾಟ ನಡೆಸಲಾಗುತ್ತಿದೆ. ೨೦೧೪ರಿಂದ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧ ಒಂದಿಲ್ಲ ಒಂದು ಸಂಚು ರೂಪಿಸುತ್ತಲೇ ಬಂದಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ಹೆಸರಲ್ಲಿ ಧಾರ್ಮಿಕ ಹಕ್ಕುಗಳ ಮೇಲೆ ಅತಿಕ್ರಮಣ ನಡೆಯುತ್ತಿದೆ ಎಂದು ದೂರಿದರು. ಬಿಜೆಪಿಯವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ದೇಶ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಮಸೀದಿ, ಮದರಸಗಳ ಸ್ವಂತ ಜಮೀನು ಕಾಪಾಡಿಕೊಳ್ಳಲು ವಕ್ಫ್ ನ್ಯಾಯ ಮಂಡಳಿ ಇದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ಪ್ರಾಣ ತೆತ್ತಿದ್ದು, ಮುಸ್ಲಿಂಮರು ಈ ದೇಶಕ್ಕೆ ಋಣಿಯಾಗಿದ್ದು, ದೇಶದ ಕಾನೂನು, ಸಂವಿಧಾನವನ್ನು ಗೌರವಿಸುತ್ತಿದ್ದೇವೆ. ವಕ್ಫ್ ಮಂಡಳಿಯನ್ನು ಭ್ರಷ್ಟ ಸಂಸ್ಥೆಯಂತೆ ಬಿಂಬಿಸಿರುವ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೌಲಾನ ಮಜರಖಾನ್ ಪಠಾಣ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆಯು ಸಂವಿಧಾನ ವಿರೋಧಿಯಾಗಿದೆ. ಇದು ಸಂವಿಧಾನ ಮೂಲ ತತ್ವಗಳಾದ ಸಮಾನತೆ, ಧರ್ಮದ ಆಧಾರದ ಮೇಲೆ ತಾರತಮ್ಯದ ನಿಷೇಧ ಮತ್ತು ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಹೀಗಾಗಿ ಈ ಮಸೂದೆಯನ್ನು ಕಾನೂನು ಆಗಿ ಮಾಡಲು ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.

ಎಲ್ಲ ವಿರೋಧ ಪಕ್ಷಗಳು ಸಂವಿಧಾನ ವಿರೋಧಿ ಎಂದು ಸ್ಪಷ್ಟಪಡಿಸಿದ್ದರೂ ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಹೇರಲು ಹೊರಟಿದೆ. ಬಿಜೆಪಿ ಸರ್ಕಾರವು ಸಂವಿಧಾನದ ಮೂಲ ಆಶಯಗಳನ್ನು ಗಾಳಿಗೆ ತೂರುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಆಗ್ರಹಿಸಿದರು.

ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರು ಹುಬ್ಬಳ್ಳಿಯ ಸಮಾರಂಭವೊಂದರಲ್ಲಿ ಪ್ರಚೋದನಕಾರಿ ಭಾಷಣ ನೀಡಿದ್ದು, ಮೊಹಮ್ಮದ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಕೀಳಾಗಿ ಮಾತನಾಡಿದ್ದು, ಸಮಸ್ತ ಮುಸ್ಲಿಂ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡಿದ್ದಾರೆ. ಜನಪ್ರತಿನಿಧಿಯಾಗಿ ಶಾಸಕ ಸ್ಥಾನಕ್ಕೆ ಅಗೌರವ ತರುವಂತಹ ಈ ರೀತಿ ಪದೇ ಪದೇ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ದ್ವೇಷ ಭಾಷಣಕಾರರನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಕೋಮು ಕ್ರಿಮಿಗಳಿಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದರು. ತಹಸೀಲ್ದಾರ್ ಅನಿಲ ಬಡಿಗೇರ ಮನವಿ ಸ್ವೀಕರಿಸಿದರು. ಪಿಎಸ್‌ಐ ಚನ್ನಯ್ಯ ದೇವೂರ ನೇತೃತ್ವದಲ್ಲಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಚಾಂದಸಾಬ ಮುಳಗುಂದ, ಹಮೀದ ಸನದಿ, ಲತಿಪಶಾ ಮಕಾನದಾರ, ಮೌಲಾನ ಕುರೇಸಿ ಮನಿಯಾರ, ಜಲಾನಿ ಮುಲ್ಲಾ, ಮುಜಮಿಲ್ ಮಕಾನದಾರ, ಅಲ್ಲಾಭಕ್ಷಿ ನಗಾರಿ, ಅಬ್ಬು ಕುಬುಸದ, ರಫಿಕ್ ಆದ್ರಳ್ಳಿ, ಮಹಬೂತ ಮಾಚೇನಹಳ್ಳಿ, ಹಸರತ ಢಾಲಾಯತ, ಜಕಾವುಲ್ಲಾ ಮಾಗಡಿ, ಇಸಾಕ ಆದ್ರಳ್ಳಿ ಸೇರಿ ಇನ್ನೂ ಅನೇಕರು ಇದ್ದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ