- ಚಿಕ್ಕಮಗಳೂರು ಜಾಯಿಂಟ್ ಆಕ್ಷನ್ ಕಮಿಟಿ । ಆಜಾದ್ ಪಾರ್ಕ್ ವೃತ್ತದಲ್ಲಿ ಹೋರಾಟ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಯಲ್ಲಿ ಧರ್ಮ ತಾರತಮ್ಯ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲ ಭೂತ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಚಿಕ್ಕಮಗಳೂರು ಜಾಯಿಂಟ್ ಆಕ್ಷನ್ ಕಮಿಟಿ ಮುಖಂಡರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಸಂವಿಧಾನದ ವಿಧಿ 14, 25, 26 ಮತ್ತು 29 ರಲ್ಲಿ ಉಲ್ಲೇಖಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ. ವಕ್ಫ್ ಆಸ್ತಿಗಳಿಗೆ ನೀಡಲಾದ ರಕ್ಷಣೆ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ದೂರಿದರು.ಭಾರತ ದೇಶದಲ್ಲಿ ಹಿಂದೂ, ಸಿಖ್, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳಿವೆ. ಆದರೆ, ಇದೀಗ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸ್ವತಂತ್ರವಾಗಿ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕಿಗೆ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಕನಿಷ್ಠ ನಾಲ್ಕು ವರ್ಷಗಳ ಓರ್ವ ಮುಸ್ಲಿಂ ವ್ಯಕ್ತಿ ತನ್ನ ಧರ್ಮ ಪಾಲಿಸದಿದ್ದಲ್ಲಿ ಆತ ತನ್ನ ಆಸ್ತಿಯನ್ನು ವಕ್ಪ್‌ಗೆ ದಾನ ಮಾಡುವ ಸ್ವಾತಂತ್ರ್ಯವನ್ನು ನೂತನ ತಿದ್ದುಪಡಿಯಲ್ಲಿ ಉಲ್ಲಂಘಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ತಿದ್ದುಪಡಿಗಳು ಇತರ ಧಾರ್ಮಿಕ ಸಂಸ್ಥೆಗಳಿಗಿಂತ ನಮ್ಮ ದತ್ತಿಗಳಿಗೆ ನೀಡಲಾದ ಹಕ್ಕುಗಳು ಮತ್ತು ರಕ್ಷಣೆಯನ್ನು ಕಸಿದುಕೊಳ್ಳುವ ತಾರತಮ್ಯದಿಂದ ಕೂಡಿದೆ. ತಿದ್ದುಪಡಿ ತನ್ನದೇ ಆದ ಮಿತಿಗಳಿಂದ ವಿನಾಯಿತಿಗಳನ್ನು ಕಸಿದುಕೊಳ್ಳುತ್ತಿದೆ. ಜೊತೆಗೆ ವಕ್ಫ್ ಆಸ್ತಿಗಳನ್ನು ನಿರ್ವಹಿಸುವ ಮತ್ತು ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದರು.ವಕ್ಫ್ ಭೂಮಿ ಅತಿಕ್ರಮಿಸಿದ್ದರೆ ತಿದ್ದುಪಡಿ ಪ್ರಕಾರ ಅತಿಕ್ರಮಿಸಿದವರೇ ಈಗ ಅವರು ಮಾಲೀಕರಾಗಬಹುದು. ಏಕೆಂದರೆ ವಿವಾದವನ್ನು ನಿರ್ಧರಿಸುವ ಅಧಿಕಾರ ಗೊತ್ತುಪಡಿಸಿದ ಅಧಿಕಾರಿ ಪರವಾಗಿ ಹೋಗುತ್ತದೆ. ಮುಸ್ಲಿಮರು ಮಾತ್ರ ವಕ್ಫ್ ಮಂಡಳಿ ಮತ್ತು ಕೇಂದ್ರ ವಕ್ಫ್ ಮಂಡಳಿ ಸದಸ್ಯರಾಗಬಹುದು ಎಂಬ ಷರತ್ತು ತೆಗೆದು ಹಾಕಲಾಗಿದೆ. ಸಿಡಬ್ಲ್ಯೂಸಿ ಮತ್ತು ವಕ್ಫ್ ಮಂಡಳಿಗಳಿಗೆ ಚುನಾವಣೆಯನ್ನು ನಾಮನಿರ್ದೇಶನದಿಂದ ಬದಲಾಯಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಮರು ಹಿಂದುಳಿದಿದ್ದಾರೆ. ಹೀಗಾಗಿ ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಎಲ್ಲ ವಿವಾದಾತ್ಮಕ ತಿದ್ದುಪಡಿ ಗಳನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.ಪ್ರತಿಭಟನೆಯಲ್ಲಿ ವಿವಿಧ ಮಸೀದಿ ಗುರುಗಳಾದ ಮೌಲನಾ ಇಮ್ರಾನ್ ಮಸೂದ್ ಸಾಬ್, ಮುಪ್ತಿ ಇಫ್ತಿಕರ್ ಅಹ್ಮದ್ ಖುರೇಶಿ, ಮೌಲನಾ ಮಹಮ್ಮದ್ ಜುಬ್ರಿಕ್ ರಾಜ್‌ನೂರಿ, ಮೌಲನಾ ಗಯಾತ್ ಅಹ್ಮದ್ ರಶೀದ್, ಹೈ ಕೋರ್ಟ್ ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಎಸ್‌ಡಿಎಫ್‌ಐ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಸೇರಿದಂತೆ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.
24 ಕೆಸಿಕೆಎಂ 5ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಚಿಕ್ಕಮಗಳೂರು ಜಾಯಿಂಟ್ ಆಕ್ಷನ್ ಕಮಿಟಿ ಮುಖಂಡರು ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ ಭಾನುವಾರ ಪ್ರತಿಭಟನೆ ನಡೆಸಿದರು.