ಕಾಂಗ್ರೆಸ್ ಸರ್ಕಾರದ ವಕ್ಫ್ ಅಕ್ರಮ ಆಸ್ತಿ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Nov 23, 2024, 12:34 AM IST
ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಅತಿಯಾದ ತುಷ್ಠೀಕರಣ ಮಾಡುವ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಹೊರಟ್ಟಿದೆ

ಗದಗ: ವಕ್ಫ್ ಹೆಸರಿನಲ್ಲಿ ರೈತರ ಭೂಮಿ, ಮಠ, ಜನಸಾಮಾನ್ಯರ ಆಸ್ತಿ ಕಬಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಿಲುವನ್ನು ಖಂಡಿಸಿ ಶುಕ್ರವಾರ ಗದಗ ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಘೋಷ ವಾಕ್ಯದಡಿಯಲ್ಲಿ ರಾಜ್ಯ ಕರೆಯ ಮೇರೆಗೆ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನರಗುಂದ ಶಾಸಕ ಸಿ.ಸಿ. ಪಾಟೀಲ, ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಅತಿಯಾದ ತುಷ್ಠೀಕರಣ ಮಾಡುವ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಹೊರಟ್ಟಿದೆ ಎಂದು ಕಿಡಿಕಾರಿದರು.

ನಾವು ಬಡವರ ಪರ, ಹಿಂದುಳಿದವರ ಪರ ಎನ್ನುವ ಸಿದ್ದರಾಮಯ್ಯ ಸರ್ಕಾರದಲ್ಲಿಯೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವರ ಸಚಿವರೇ ನೇರವಾಗಿ ಭಾಗಿಯಾಗಿ ಅದೇ ಹಣದಲ್ಲಿ ತೆಲಂಗಾಣ ಮತ್ತು ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾರೆ ಎನ್ನುವುದು ಜಗಜ್ಜಾಹೀರವಾಗಿದೆ. ಸಿದ್ದರಾಮಯ್ಯ ಹಿರಿಯ ನಾಯಕರಾಗಿದ್ದು, ನಿಮ್ಮ ಸರ್ಕಾರ ಕೇವಲ ಒಂದು ಸಮುದಾಯದ ಮತ ಪಡೆದು ಅಧಿಕಾರಕ್ಕೆ ಬಂದಿಲ್ಲ, ಎಲ್ಲ ಸಮುದಾಯದವರು ನಿಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ. ಆದರೆ ನೀವು ಮಾಡುತ್ತಿರುವುದು ಮಾತ್ರ ಕೇವಲ ಒಂದು ಸಮುದಾಯದ ಓಲೈಕೆ. ನಾನು ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲ ನಾಯಕರಿಗೆ ವಿನಂತಿಸುತ್ತೇನೆ, ಮುಸ್ಲಿಂ ಸಮುದಾಯದ ಅತೀಯಾದ ಓಲೈಕೆ ಒಳ್ಳೆಯದಲ್ಲ, ಸಧ್ಯಕ್ಕೆ ನಿಮ್ಮ ಅಧಿಕಾರದ ಆಸೆಗಾಗಿ ಹೀಗೆ ಮಾತನಾಡಿದರೆ ಮುಂದೆ ನಿಮ್ಮ ಮಕ್ಕಳು, ಮೊಮ್ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯೋರ್ವರು ಅಧಿಕಾರದಲ್ಲಿದ್ದ ವೇಳೆಯಲ್ಲಿ ಲೋಕಾ ತನಿಖೆ ಎದುರಿಸಿದ ಇತಿಹಾಸ ಸಿದ್ಧರಾಮಯ್ಯ ನಿರ್ಮಿಸಿದ್ದಾರೆ. ಮಾತನಾಡಿದರೆ ಸಾಕು ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ ಎನ್ನುವ ಅವರ ಸರ್ಕಾರ ಪ್ರಸ್ತುತ ಭ್ರಷ್ಟಾಚಾರದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ನಮ್ಮ ಆಸ್ತಿಯನ್ನು ನೀವೇ ವಕ್ಫ್ ಆಸ್ತಿಯನ್ನಾಗಿ ಮಾಡಿದ್ದೀರಿ. ಈಗ ನೀವೇ ಅದನ್ನು ಸರಿ ಮಾಡಿಕೊಡಿ, ನಾವಾಗಲಿ ನಮ್ಮ ರೈತರಾಗಲಿ ನ್ಯಾಯಾಲಯಕ್ಕೆ ಹೋಗುವದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಉಮೇಶಗೌಡ ಪಾಟೀಲ, ಶ್ರೀಪತಿ ಉಡುಪಿ, ಶಿವಕುಮಾರ ನಿಲಗುಂದ, ಸಿದ್ದಣ್ಣ ಪಲ್ಲೇದ್, ಶಾಂತಣ್ಣ ಕಲಕೇರಿ, ಪ್ರೇಮನಾಥ ಬಣ್ಣದ, ನಿರ್ಮಲಾ ಕೊಳ್ಳಿ, ಅಶ್ವಿನಿ ಜಗತಾಪ, ವಿಜಯಲಕ್ಷ್ಮೀ ದಿಂಡೂರ, ವಿದ್ಯಾವತಿ ಗಡಗಿ, ಜಯಶ್ರೀ ಉಗಲಾಟ, ವಿಜಯಲಕ್ಷ್ಮೀ ಮಾನ್ವಿ, ಪ್ರಭಾವತಿ ಬೆಳವಟಗಿ, ಲಕ್ಷ್ಮೀ ಖಾಕಿ, ಶಿವಪ್ಪ ಅಂಕದ, ಇರ್ಷಾದ್ ಮಾನ್ವಿ, ಮಂಜುನಾಥ ಮುಳಗುಂದ, ಸಂತೋಷ್ ಅಕ್ಕಿ, ಸಂಗಮೇಶ ದುಂದೂರ, ಶಶಿಧರ ದಿಂಡೂರ, ರಮೇಶ ಸಜ್ಜಗಾರ, ಅಶ್ವಿನಿ ಅಂಕಲಕೊಟಿ, ಸ್ವಾತಿ ಅಕ್ಕಿ, ಬಸವರಾಜ ಇಟಗಿ, ಸಿದ್ದೇಶ ಹೂಗಾರ, ಚನ್ನಪ್ಪ ನೆಗಳೂರ, ನಾಗರಾಜ ಕುಲಕರ್ಣಿ, ಚಂದ್ರಶೇಖರ ತಡಸದ, ಎಂ.ಎಚ್.ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಮಹೇಶ್ ದಾಸರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ನಿರೂಪಿಸಿದರು.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವುದು ನಿರ್ಲಜ್ಜ, ತುಷ್ಠೀಕರಣದಲ್ಲಿ ಮಿತಿ ಮೀರಿದ ಸರ್ಕಾರವಾಗಿದೆ. 2 ವರ್ಷಗಳಲ್ಲಿ‌ ಯಾವುದೇ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿಲ್ಲ, ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ರಾಜ್ಯದ ಜನರನ್ನು ಶೋಷಣೆ ಮಾಡುತ್ತಲೇ ಇದ್ದಾರೆ. ರಾಜ್ಯದಲ್ಲಿ ಈಗಲೇ ಚುನಾವಣೆ ನಡೆದರೆ ಕಾಂಗ್ರೆಸ್ ಗೆ 50 ಸ್ಥಾನ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಸಿದ್ಧರಾಮಯ್ಯ ಅವರೇ ತಕ್ಷಣವೇ ನಿಮ್ಮ ಪಕ್ಷದ ಶಾಸಕರ ಕ್ಲೋಸ್‌ ಡೋರ್ ಮೀಟಿಂಗ್ ಮಾಡಿ ಆವಾಗಲೇ ನಿಮ್ಮ ಸರ್ಕಾರ ಸ್ಥಿತಿಗತಿಯ ಬಗ್ಗೆ ನಿಮ್ಮ ಶಾಸಕರು ಏನು ಹೇಳುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. 13ನೇ ಶತಮಾನದ ಸಿಂದಗಿ ಮಠದ ಆಸ್ತಿ ಇಂದು ವಕ್ಫ್ ಎಂದು‌ ದಾಖಲಾಗುತ್ತದೆ ಎಂದರೆ ಹೇಗೆ ಇದಕ್ಕೆ ನಿಮ್ಮ ಆತ್ಮ ಸಾಕ್ಷಿಯನ್ನಾದರೂ ಕೇಳಿಕೊಳ್ಳಬೇಕು ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಬಿಪಿಎಲ್ ಕಾರ್ಡ ರದ್ದು ಮಾಡಿ ಬಡವರಿಗೆ ತೊಂದರೆ ಕೊಡುತ್ತಿದ್ದೀರಿ. ಸಿದ್ಧರಾಮಯ್ಯ ಪಂಚ ಗ್ಯಾರಂಟಿ ಎನ್ನುವ ಬಂಗಾರದ ಚಾಕು ನುಂಗಿದ್ದಾರೆ. ಅದರಿಂದ ಈಗ ಅವರೇ ತೊಂದರೆ ಅನುಭವಿಸುವಂತಾಗಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ