ಕನ್ನಡಪ್ರಭ ವಾರ್ತೆ ರಾಮನಗರ
ಚಿಕ್ಕೇಗೌಡನದೊಡ್ಡಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಹರೀಸಂದ್ರ, ಚಿಕ್ಕೇಗೌಡನ ದೊಡ್ಡಿ, ಕಾಳೇಗೌಡನದೊಡ್ಡಿ, ಪಾದರಹಳ್ಳಿ, ಬೆಜ್ಜರಹಳ್ಳಿಕಟ್ಟೆ, ಮಾರೇಗೌಡನದೊಡ್ಡಿ, ಹನುಮಂತೇಗೌಡನ ದೊಡ್ಡಿ, ಕೆಂಪೇಗೌಡನದೊಡ್ಡಿ, ಮದರ್ ಸಾಬರದೊಡ್ಡಿ, ಆಲೆಮರದದೊಡ್ಡಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಸಭೆ ನಡೆಸಿ, ಜಿಲ್ಲಾಡಳಿತ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದಿಂದ ಹಿಂದೆ ಸರಿಯುವವರೆಗೆ ನಿರಂತರವಾಗಿ ಪ್ರತಿಭಟನಾ ಧರಣಿ ನಡೆಸಲು ನಿರ್ಧರಿಸಲಾಯಿತು.
ಪ್ರತಿ ಹಳ್ಳಿಗಳಲ್ಲಿ ಆಟೋ ಪ್ರಚಾರ ಜೊತೆಗೆ ಕರಪತ್ರಗಳನ್ನು ಹಂಚಿ ಗ್ರಾಮಸ್ಥರನ್ನು ಹೋರಾಟದಲ್ಲಿ ಭಾಗಿಯಾಗುವಂತೆ ಮಾಡುವುದು. ಅಲ್ಲದೆ, ಮೇ 8ರಂದು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಜನರನ್ನು ಸೇರಿಸಿ ಚಿಕ್ಕೇಗೌಡನದೊಡ್ಡಿಯ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಘಟಕ ನಿರ್ಮಾಣದ ಸ್ಥಳದವರೆಗೆ ಪಾದಯಾತ್ರೆ ನಡೆಸಿ ಧರಣಿ ಕೂರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಚಿಕ್ಕೇಗೌಡನದೊಡ್ಡಿ ಗ್ರಾಮದ ಮುಖಂಡ ದೊಡ್ಡ ವೀರಯ್ಯ ಮಾತನಾಡಿ, ಹರೀಸಂದ್ರ ಸರ್ವೇ ನಂಬರ್ 166ರ ಸರ್ಕಾರಿ ಜಮೀನಿನಲ್ಲಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ರಾಮನಗರ ನಗರಸಭೆಗೆ 9.38 ಎಕರೆ ಹಾಗೂ ಬಿಡದಿ ಪುರಸಭೆ 9 ಎಕರೆ ಮಂಜೂರಾಗಿರುವುದನ್ನು ರದ್ದು ಪಡಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇಲ್ಲಿ ಘಟಕ ನಿರ್ಮಾಣವಾಗುವುದರಿಂದ ಕೃಷಿ ಚಟುವಟಿಕೆ, ವಾಯು ಮಾಲಿನ್ಯ, ಜಲ ಮಾಲಿನ್ಯ, ಹೈನುಗಾರಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ರಾಮನಗರ ಮತ್ತು ಬಿಡದಿ ಪಟ್ಟಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಅಲ್ಲಿನ ಕಸವನ್ನು ಇಲ್ಲಿ ಸುರಿದು ಹಳ್ಳಿಗಳ ವಾತಾವರಣವನ್ನು ಕಲುಷಿತಗೊಳಿಸಲು ಅವಕಾಶ ನೀಡುವುದಿಲ್ಲ. ಘಟಕ ನಿರ್ಮಾಣದಿಂದ ಹಿಂದೆ ಸರಿಯದಿದ್ದರೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಬೇಕಾದ ಜಿಲ್ಲಾಡಳಿತ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರು ಅಲ್ಲಿಯೇ ಘಟಕ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದಾರೆ. ಮುಂದಾಗುವ ಎಲ್ಲ ಅನಾಹುತಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಹೇಳಿದರು.
ಬಿಡದಿ ಪುರಸಭೆ ತ್ಯಾಜ್ಯವನ್ನು ಕಲ್ಲುಗೋಪಹಳ್ಳಿ ಅಥವಾ ಸುತ್ತಮುತ್ತಲ ಕ್ವಾರೆಗಳಲ್ಲಿ ವಿಲೇವಾರಿ ಮಾಡಬಹುದು. ರಾಮನಗರ ನಗರಸಭೆ ತ್ಯಾಜ್ಯವನ್ನು ಕೊತ್ತೀಪುರ ಸೇರಿದಂತೆ ಹಲವೆಡೆ ವಿಲೇವಾರಿ ಮಾಡಲು ಜಾಗವಿದೆ. ಕೂಡಲೇ ಜಿಲ್ಲಾಡಳಿತ ಘಟಕ ನಿರ್ಮಾಣದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.