ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಸೇರಿದ ಕಾರ್‍ಯಕರ್ತರು ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗದಲ್ಲಿ ತೆರಳಿ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಕೆಲ ಕಾಲ ಧರಣಿ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು,ಜನಗಣತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಹೆಸರಿನಲ್ಲಿ ಮಹಿಳೆಯರಿಗೆ ಸಿಗಬೇಕಾದ ಶೇಕಡಾ 33 ರಷ್ಟು ಮೀಸಲಾತಿಯನ್ನು ವಂಚಿಸಲು ಯತ್ನಿಸುತ್ತಿರುವ ಕ್ರಮ ಕೈ ಬಿಟ್ಟು ಶೀಘ್ರ ಈ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಲೋಕಸಭೆಯಲ್ಲಿ 543 ಸದಸ್ಯರಲ್ಲಿ ಕೇವಲ 74 ಮಹಿಳೆಯರು (ಶೇ.14ಕ್ಕಿಂತ ಕಡಿಮೆ) ಮಾತ್ರ ಇದ್ದಾರೆ. ರಾಜ್ಯಸಭೆಯಲ್ಲಿ 245 ಸದಸ್ಯರಲ್ಲಿ 42 ಮಹಿಳೆಯರು (ಸುಮಾರು ಶೇ.17) ಮಾತ್ರ ಸದಸ್ಯರಿದ್ದಾರೆ. ಕರ್ನಾಟಕ ವಿಧಾನಸಭೆ ಪರಿಸ್ಥಿತಿ ಇನ್ನೂ ಹೆಚ್ಚು ಕಳವಳಕಾರಿಯಾಗಿದೆ. 224 ಸದಸ್ಯರಲ್ಲಿ ಕೇವಲ 10 ಮಹಿಳೆಯರು (ಶೇ.4.46 ) ಮಾತ್ರ ಸದಸ್ಯರಿದ್ದಾರೆ. ಹಾಗಾಗಿ ಮಹಿಳಾ ಮೀಸಲಾತಿಯನ್ನು ತಕ್ಷಣ ಮತ್ತು ಷರತ್ತುಗಳಿಲ್ಲದೆ ಜಾರಿಗೊಳಿಸುವಂತೆ ಆಗ್ರಹಿಸಿದರು.
ಈ ಕಾಯ್ದೆ ಜಾರಿಯನ್ನು ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡನೆ (ಡಿಲಿಮಿಟೇಶನ್) ಪ್ರಕ್ರಿಯೆಗಳೊಂದಿಗೆ ಜೋಡಿಸಿರುವ ಷರತ್ತುಗಳನ್ನು ತೆಗೆದುಹಾಕಿ ಯಾವುದೇ ವಿಳಂಬವಿಲ್ಲದೆ ಕೇಂದ್ರ ಸರ್ಕಾರವು ಸಂಸತ್ತಿನ ಪ್ರಸಕ್ತ ಅವೇಶನದಲ್ಲಿಯೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿದರು.