ಕಾರಟಗಿ: ರಾಜ್ಯದಲ್ಲಿ ವಿಶೇಷ ಮತದಾನ ಪರಿಷ್ಕರಣೆಯ ಹೆಸರಿನಲ್ಲಿ ೪೩,೮ ಲಕ್ಷ ಜನ ಮತದಾರರನ್ನು ಸ್ಥಳಾಂತರದ ಹೆಸರಿನಲ್ಲಿ ತೆಗೆಯುವ ಹುನ್ನಾರ ನಡೆದಿದ್ದೆ. ಇದನ್ನು ವಿರೋಧಿಸಿ ಸೆ. ೧ರಂದು ಚುನಾವಣೆ ಆಯೋಗದ ವಿರುದ್ಧ ಬೆಂಗಳೂರು ಚಲೋ ನಡೆಸಲಿದ್ದು, ಪ್ರತಿಭಟನೆ ಮೆರವಣಿಗೆ ಮೂಲಕ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ನಾಗರಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ದುರುಗೇಶ ಬರಗೂರು ಹೇಳದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ. ಆಕ್ಷೇಪಣೆಗೆ ಒಂದು ತಿಂಗಳ ಕಾಲಾವಕಾಶ ಸಾಲದು ಆರು ತಿಂಗಳು ನೀಡಬೇಕು. ಬೇರೆ ಕಡೆ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಿ ಎನ್ಯುಮರೇಷನ್ ಫಾರಂ ನೀಡುವ ಕೆಲಸ ಆಗಬೇಕು. ಕರ್ನಾಟಕದ ೨೦೨೫ರ ಮತದಾರರ ಪಟ್ಟಿಯಲ್ಲಿದ್ದ ೫.೫೪ಕೋಟಿ ಮತಗಳ ಪೈಕಿ ೧.೦೮ ಕೋಟಿ ಮತ ಶಾಶ್ವತವಾಗಿ ತೆಗೆಯಲು ಮುಂದಾಗಿರುವುದು ಸರಿಯಲ್ಲ. ಇಂಥ ದೋಷಪೂರಿತ ಪ್ರಕ್ರಿಯೆ ರೂಪಿಸಿರುವ ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ಜ್ಞಾನೇಶ್‌ಕುಮಾರ್ ಅವರು ರಾಜಿನಾಮೆ ಕೊಡಬೇಕೆಂದು ಒತ್ತಾಯಿಸಿದರು.
ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಎಂ.ಡಿ.ಸಿರಾಜ್ ಮಾತನಾಡಿ, ಯಾವೊಬ್ಬ ಮತದಾರರನ್ನು ಸಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಡಿಲೀಟ್ ಮಾಡಲಾಗಿರುವ ಕನಿಷ್ಠ ೬೦ ಲಕ್ಷ ಮತದಾರರು ಸೇರ್ಪಡೆಗೊಳ್ಳಲು ಅವಕಾಶ ನೀಡಬೇಕು. ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ಕಡ್ಡಾಯವಾಗಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಕ್ಷೇಪಣೆ ಹಾಗೂ ಅಫೀಲು ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಬೇಕು ಎಂದರು.ಮುಖಂಡ ಖಾಜಾ ಹುಸೇನ್ ಮುಲ್ಲಾ, ಲಿಂಗತ್ವ ಅಲ್ಪಸಂಖ್ಯಾತರ ಮುಖಂಡೆ ರಮ್ಯಾ ಮಾತನಾಡಿ, ಈ ಎಸ್ಐಆರ್ ಪ್ರತಿಕ್ರಿಯೆ ದೋಷಪೂರಿತದ್ದಾಗಿದೆ. ಈ ಅವೈಜ್ಞಾನಿಕ ಎಸ್ಐಆರ್ ಪ್ರಕ್ರಿಯೆಯಿಂದ ರಾಷ್ಟ್ರದ ಕೋಟ್ಯಂತರ ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಆ ಕಾರಣಕ್ಕೆ ಈ ಇಡೀ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಕದ ತಟ್ಟಲಿದ್ದೇವೆ ಎಂದರು.