ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆ: ಭೂಮಿ ನೀಡಲು ಆಗ್ರಹ

KannadaprabhaNewsNetwork | Published : Aug 22, 2024 12:46 AM

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ವಿರೋಧಿಸಿ ಹಾಗೂ ಭೂಮಿ ಇಲ್ಲದವರಿಗೆ ಭೂಮಿ ನೀಡುವ ಜೊತೆಗೆ ಪರಿಸರ ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಕಾರ್ಯಕರ್ತರು ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

- ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಕಾರ್ಯಕರ್ತರಿಂದ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ

- - -

- ಭೂ ಮಾಲೀಕರಿಗೆ ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡುವ ಸರ್ಕಾರದ ನಿಲುವು ಖಂಡನೀಯ.

- ಅರಣ್ಯ, ಕಂದಾಯ ಇಲಾಖೆ ಕಾಫಿ ಗಿಡಗಳನ್ನು ನಾಶ ಮಾಡಿ ಬಡವರ ಬದುಕು ಕಿತ್ತುಕೊಳ್ಳುತ್ತಿದೆ

- ಕಾರ್ಪೊರೇಟ್ ಕಂಪನಿಗಳಿಗೆ ಹತ್ತಾರು ಎಕರೆ ಭೂಮಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ವಿರೋಧಿಸಿ ಹಾಗೂ ಭೂಮಿ ಇಲ್ಲದವರಿಗೆ ಭೂಮಿ ನೀಡುವ ಜೊತೆಗೆ ಪರಿಸರ ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಕಾರ್ಯಕರ್ತರು ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮಲೆನಾಡು ಭಾಗದಲ್ಲಿ ಬಡವರು ಜೀವನೋಪಾಯಕ್ಕೆಒತ್ತುವರಿ ಮಾಡಿದ ಒಂದು, ಎರಡು ಎಕರೆ ಸಾಗುವಳಿ ಜಮೀನನ್ನು ಯಾವುದೇ ತಿಳುವಳಿಕೆ ಪತ್ರ ನೀಡದೆ ತೆರವು ಮಾಡಲಾಗುತ್ತಿದೆ. ಜಮೀನಿನಲ್ಲಿ 30 - 40 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಏಕಾಏಕಿ ನಾಶ ಮಾಡಿ ಬಡವರ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಈ ಕ್ರಮದಿಂದ ಮಲೆನಾಡಿನಲ್ಲಿ ಸಾವಿರಾರು ಕುಟುಂಬಗಳು ಭೂಮಿ ಹಾಗೂ ಸೂರನ್ನು ಕಳೆದು ಕೊಂಡು ಬೀದಿಗೆ ಬಂದಿವೆ. ಇನ್ನೂ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಆತಂಕದಲ್ಲಿವೆ. ಇದನ್ನು ಮನಗಂಡು ಕೂಡಲೇ ಸರ್ಕಾರ ಒತ್ತುವರಿ ತೆರವು ಹೆಸರಿನಲ್ಲಿ ಬಡವರು ಕಟ್ಟಿಕೊಂಡ ಸೂರು ಮತ್ತು ಭೂಮಿ ನಾಶಪಡಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ನೂರಾರು ಎಕರೆ ಭೂಮಿ ಹೊಂದಿದ ಭೂ ಮಾಲೀಕರಿಗೆ ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡಲು ಹೊರಟಿರುವ ಸರ್ಕಾರದ ನಿಲುವು ಖಂಡನೀಯ. ಜೀವನೋಪಾಯಕ್ಕಾಗಿ ಬಡವರು ಮಾಡಿದ ಒಂದು ಅಥವಾ ಎರಡು ಎಕರೆ ಒತ್ತುವರಿಯನ್ನು ಪರಿಸರ ರಕ್ಷಣೆ ಮತ್ತು ವಿಕೋಪ ತಡೆಗೆಂದು ತೆರವುಗೊಳಿಸಲಾಗುತ್ತಿದೆ. ಆದರೆ, ಭೂ ಮಾಲೀಕರು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಹತ್ತಾರು ಎಕರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬದುಕಿಗಾಗಿ ಬಡವರು ಒತ್ತುವರಿ ಮಾಡಿದ ಭೂಮಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಾದರೆ ಅರಣ್ಯ ಹಕ್ಕು ಕಾಯ್ದೆಯಡಿ ಅವರಿಗೆ ಮಂಜೂರು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಬೇಕು. ಇದರ ಹೊರತಾಗಿ ಒತ್ತುವರಿ ತೆರವು ಹೆಸರಿನಲ್ಲಿ ಬಡವರ ಬದುಕು ಬೀದಿಗೆ ತರುವುದು ಸರಿಯಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನ ಶಕ್ತಿ ರಾಜ್ಯ ಸಮಿತಿ ಉಪಾಧ್ಯಕ್ಷ ಗೌಸ್ ಮೊಹಿಯುದ್ದೀನ್, ಪ್ರಮುಖರಾದ ಸುರೇಶ್, ಅತಿಕ್, ವೆಂಕಟೇಶ್, ಆನಂದ್, ಮುನೀರ್, ಗೋಪಾಲಗೌಡ, ಕಬ್ಬಿಗೆರೆ ಮೋಹನ್‌ಕುಮಾರ್‌ ಹಾಗೂ ಕಾರ್ಯಕರ್ತರು ಇದ್ದರು. 21 ಕೆಸಿಕೆಎಂ 1

ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಗೌಸ್ ಮೊಹಿಯುದ್ದೀನ್, ಮೋಹನ್‌ಕುಮಾರ್‌, ಸುರೇಶ್, ಅತಿಕ್, ವೆಂಕಟೇಶ್, ಆನಂದ್, ಮುನೀರ್, ಗೋಪಾಲಗೌಡ ಇದ್ದರು.

Share this article