ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಗಳ ಜಾತಿ ಸಮೀಕ್ಷೆಯಲ್ಲಿ ವೀರಶೈವ ಜಂಗಮರು ಬೇಡ ಜಂಗಮ ಎಂಬುದಾಗಿ ಸುಳ್ಳು ಮಾಹಿತಿ ನೀಡಿ, ದಾಖಲಿಸುತ್ತಿದ್ದಾರೆ. ಈ ನಡೆಯನ್ನು ಖಂಡಿಸಿ ಪರಿಶಿಷ್ಟ ಜಾತಿ-ಪಂಗಡಗಳ ವಕೀಲರು ದಾವಣಗೆರೆ ರಾಜ್ಯವ್ಯಾಪಿ ಮೇ 27ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಿ, ಆಯಾ ಜಿಲ್ಲಾ ಆಡಳಿತಗಳ ಮೂಲಕ ರಾಜ್ಯ ಸರ್ಕಾರದ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗಕ್ಕೆ ಮನವಿ ಸಲ್ಲಿಸುವಂತೆ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳ ಹಿರಿಯ ವಕೀಲರು ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲ ಮಾದಿಗ ಸಮುದಾಯದ ಬಿ.ಎಂ.ಹನುಮಂತಪ್ಪ ಮಾತನಾಡಿ, ರಾಜ್ಯದಲ್ಲಿ ವೀರಶೈವ ಜಂಗಮರು ಬೇಡ ಜಂಗಮರ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಜಾತಿ ಗಣತಿಯಲ್ಲಿ ಸೇರ್ಪಡೆ ಮಾಡುತ್ತಿರುವುದನ್ನು ತಕ್ಷಣವೇ ತಡೆ ಹಿಡಿಯಬೇಕು. ಪರಿಶಿಷ್ಟ ಜಾತಿಯವರ ಅನ್ನದ ತಟ್ಟೆ ಕಸಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಬೇಡ ಜಂಗಮರು ನಮ್ಮ ದಾವಣಗೆರೆ ಜಿಲ್ಲೆಯಲ್ಲಿ ಇಲ್ಲ. ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ, ವಿಜಯ ನಗರ, ರಾಯಚೂರು, ಕೊಪ್ಪಳ, ಬೀದರ್, ಕಲ್ಬುರ್ಗಿ, ಕೋಲಾರ ದಂತಹ ಗಡಿ ಜಿಲ್ಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಲೆಮಾರಿಗಳು, ಮಾಂಸಹಾರಿಗಳಾದ ಬೇಡ ಜಂಗಮರಿದ್ದಾರೆ. ಮೂಲತಃ ಬುರ್ರ ಕಥೆ ಹೇಳಿ, ವಿವಿಧ ಪೌರಾಣಿಕ ಪಾತ್ರಗಳ ವೇಷಧರಿಸಿ, ಭಿಕ್ಷಾಟನೆ ಮಾಡುವ ಸಮುದಾಯ ಬೇಡ ಜಂಗಮ. ಆದರೆ, 3ಬಿ ವರ್ಗದಲ್ಲಿರುವ ವೀರಶೈವ ಜಂಗಮರು ಇಂತಹ ಬೇಡ ಜಂಗಮರ ಹೆಸರಿನಲ್ಲಿ ಮೀಸಲಾತಿ ಕಸಿಯಲು ಹೊರಟಿದ್ದು ಅಕ್ಷಮ್ಯ ಎಂದು ಹೇಳಿದರು.ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ವೀರಶೈವ ಜಂಗಮರು ತಾವು ಬೇಡ ಜಂಗಮರು ಎಂಬುದಾಗಿ ದಾಖಲಿಸುತ್ತಿರುವುದನ್ನು ಪರಿಗಣಿಸಬಾರದು. ವೀರಶೈವ, ಲಿಂಗಾಯತ ಮಠಾಧೀಶರು ಸಹ ವೀರಶೈವ ಲಿಂಗಾಯತ ಜಂಗಮರ ಬಗ್ಗೆ ಧ್ವನಿ ಎತ್ತಬೇಕು ಎಂದು ಅವರು ಒತ್ತಾಯಿಸಿದರು.
ಲಂಬಾಣಿ ಸಮುದಾಯದ ರಾಘವೇಂದ್ರ ನಾಯ್ಕ ಮಾತನಾಡಿ, 101 ಜಾತಿಗಳನ್ನು ಒಳಗೊಂಡ ಪರಿಶಿಷ್ಟ ಜಾತಿಯ ಮೀಸಲಾತಿ ಕಸಿಯುವ ದುಸ್ಸಾಹಸ ತಡೆಯುವಂತೆ ಒತ್ತಾಯಿಸಿ ದಾವಣಗೆರೆ ಸೇರಿದಂತೆ ರಾಜ್ಯವ್ಯಾಪಿ ಮೇ 27ರಂದು ಪರಿಶಿಷ್ಟ ಜಾತಿಯ ಎಲ್ಲ ಸಮದಾಯಗಳ ವಕೀಲರು ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರ, ನ್ಯಾ.ನಾಗಮೋಹನ ದಾಸ್ ಆಯೋಗಕ್ಕೆ ಮನವಿ ಅರ್ಪಿಸಲಿದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ಜಾತಿಗಳ ವಕೀಲರಾದ ವಿ.ಗೋಪಾಲ, ನಾಗರಾಜ ಪೂಜಾರ, ಬಿ.ಡಿ.ಪ್ರಕಾಶ, ಧನಂಜಯ, ಕೃಷ್ಣ ನಾಯ್ಕ, ಕೆ.ಎನ್. ರಂಗಸ್ವಾಮಿ, ಎಸ್.ರಾಜಪ್ಪ, ಮಲ್ಲೇಶ, ದಾನಪ್ಪ, ಸಂತೋಷ ನಾಯ್ಕ, ಎನ್.ಬಿ. ನಾಗರಾಜ, ಮಲ್ಲಿಕಾರ್ಜುನ, ಇತರರು ಇದ್ದರು.
- - -(ಟಾಪ್ ಕೋಟ್)
ರಾಜ್ಯದಲ್ಲಿ ವೀರಶೈವ ಜಂಗಮರು ಪೌರೋಹಿತ್ಯ ಮಾಡಿ, ಪೂಜೆ ಮಾಡಿಸುತ್ತಾರೆ. ಇಂಥವರು ಬೇಡ ಜಂಗಮರಲ್ಲ. ಆದರೂ, ಮಕ್ಕಳ ಶಾಲಾ ದಾಖಲಾತಿಗಳಲ್ಲಿ ಬೇಡ ಜಂಗಮರೆಂದು ದಾಖಲಿಸುತ್ತಿರುವುದು ಖಂಡನೀಯ. ಒಳ ಮೀಸಲಾತಿ ಪಡೆಯಲು ಬೇಡ ಜಂಗಮರ ಹೆಸರಿನಲ್ಲಿ ನುಸುಳುತ್ತಿರುವ ಇಂತಹವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು.- ಬಿ.ಎಂ. ಹನುಮಂತಪ್ಪ, ಹಿರಿಯ ವಕೀಲ
- - - -23ಕೆಡಿವಿಜಿ1.ಜೆಪಿಜಿ:ದಾವಣಗೆರೆಯಲ್ಲಿ ಶುಕ್ರವಾರ ಪರಿಶಿಷ್ಟ ಜಾತಿಗಳ ವಕೀಲರಾದ ಬಿ.ಎಂ.ಹನುಮಂತಪ್ಪ, ರಾಘವೇಂದ್ರ ನಾಯ್ಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.