ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಆರೋಪಿಯ ವಿರುದ್ಧ ಪ್ರತಿಭಟನೆ ಮಾಡಿದ ಮೂವರು ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿರುವುದನ್ನು ವಿರೋಧಿಸಿ ಬೆಳ್ತಂಗಡಿ ತಾಲೂಕು ಎಬಿವಿಪಿ ಕಾರ್ಯಕರ್ತರು ಸೋಮವಾರ ಉಜಿರೆಯಲ್ಲಿ ಪ್ರತಿಭಟಿಸಿದರು. ಉಜಿರೆಯ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತ ಬಂದು ಮುಖ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಮಂಗಳೂರು ಎಬಿವಿಪಿ ವಿಭಾಗ ಖೇಲ್ ಸಂಯೋಜಕ ಸುವಿತ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ, ಚಾಕು ಇರಿತ ಇತ್ಯಾದಿಗಳಿಂದ ಜೀವಕ್ಕೆ ಬೆಲೆಯಿಲ್ಲದಂತಾಗಿದೆ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ವಿದ್ಯಾರ್ಥಿಗಳ ಪ್ರಾಣಕ್ಕೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು.
ನೇಹಾ ಹತ್ಯೆಯ ಆರೋಪಿ ಫಯಾಜ್ ನನ್ನು ಸರ್ಕಾರ ಜೈಲಿನೊಳಗೆ ಪೋಷಿಸುತ್ತಿದೆ. ಮೂವರು ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿರುವ ಪ್ರಕರಣದ ಬಗ್ಗೆ ನ್ಯಾಯ ಕೇಳಿದ್ದು ತಪ್ಪಾ? ಅವರ ಮೇಲಿನ ಎಫ್ ಐ ಆರ್ ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ನಡೆಯಲಿರುವ ಅಹಿತಕರ ಘಟನೆಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.ರಾಜ್ಯಾದ್ಯಂತ ಎಬಿವಿಪಿ ಮುಂದಿನ ಎರಡು ದಿನ ಕಪ್ಪು ಪಟ್ಟಿ ಧರಿಸಿ ಉಗ್ರವಾಗಿ ಪ್ರತಿಭಟಿಸಲಿದೆ. ಗೃಹ ಸಚಿವರು,ಮುಖ್ಯಮಂತ್ರಿಗಳ ನಿವಾಸಕ್ಕೂ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ರಕ್ಷಣೆಯಿಲ್ಲವಾಗಿದೆ. ಆರೋಪಿಗೆ ಶಿಕ್ಷೆಯಾಗಲೇಬೇಕು. ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕಾರ್ಯಕರ್ತ ರಕ್ಷಿತ್ ನುಡಿದರು.ಕಾರ್ಕಳ, ಉಡುಪಿ, ಸುಳ್ಯ, ಕಡಬದಲ್ಲಿ ನಡೆದ ಘಟನೆಗಳ ಬಗೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತ ಸೆಬೆಸ್ಟಿನ್ ಹಾಗು ಮಲ್ಲಿಕಾರ್ಜುನ್ ಮಾತನಾಡಿದರು.
ಮುಖ್ಯ ವೃತ್ತದ ದ್ವಾರದ ಬಳಿ 5 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.