ಸಾಮೂಹಿಕ ಅತ್ಯಾಚಾರ, ಕ್ರೂರ ಹತ್ಯೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Aug 17, 2024, 12:46 AM IST
ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಯುವವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ವಿಜಯಪುರದಲ್ಲಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ, ಭಾರತೀಯ ವೈದ್ಯಕೀಯ ಸಂಘ, ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.  | Kannada Prabha

ಸಾರಾಂಶ

ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಕರ್ತವ್ಯನಿರತ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಹತ್ಯೆ ಖಂಡಿಸಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ನೇತೃತ್ವದಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಮೆರವಣಿಗೆಯುದ್ದಕ್ಕೂ ಘೋಷಣೆ ಹಾಕಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಕರ್ತವ್ಯನಿರತ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಹತ್ಯೆ ಖಂಡಿಸಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ನೇತೃತ್ವದಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಮೆರವಣಿಗೆಯುದ್ದಕ್ಕೂ ಘೋಷಣೆ ಹಾಕಿದರು.

ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಜಾಥಾ ನಡೆಸಿದ ನೂರಾರ ವೈದ್ಯರು, ಗಾಂಧಿಚೌಕ್, ಬಸವೇಶ್ವರ ಚೌಕ್ ಮೂಲಕ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ್ ಚೌಕಿನಲ್ಲಿ ಮಾನವ ಸರಪಳಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಟಿ.ಭೂಬಾಲನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಸಂಯೋಜಕ ಮತ್ತು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸಂಜೀವಕುಮಾರ ಬೆಂಟೂರ ಮಾತನಾಡಿ, ಕೊಲ್ಕತ್ತದಲ್ಲಿ ನಡೆದ ಯುವವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಹೀನ ಕೃತ್ಯವಾಗಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ದೇಶದಲ್ಲಿ ಸರಕಾರಗಳು ಮಹಿಳಾ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೇ, ಭವಿಷ್ಯದಲ್ಲಿ ಇಂಥ ಘಟನೆ ತಡೆಗಟ್ಟಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ, ಮಹಿಳೆಯರ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.ಬಿ.ಎಂ.ಪಾಟೀಲ ಮೆಡಿಕಲ್ ಕಾಲೇಜನ ಡೀನ್ ಡಾ.ತೇಜಶ್ವಿನಿ ವಲ್ಲಭ ಮಾತನಾಡಿ, ಇದೊಂದು ಅಮಾನವೀಯ ಕೃತ್ಯವಾಗಿದೆ. ಇಂಥ ವಾತಾವರಣದಲ್ಲಿ ಮಹಿಳಾ ವೈದ್ಯರಿಗೆ ರಾತ್ರಿ ವೇಳೆ ಕೆಲಸ ಮಾಡಲು ಆದೇಶ ಮಾಡುವುದು ನನ್ನಂತ ಹಿರಿಯ ವೈದ್ಯೆಗೆ ಸವಾಲಾಗಿದೆ. ಇಂಥ ಭಯದ ವಾತಾವರಣದಲ್ಲಿ ಮಹಿಳಾ ವೈದ್ಯರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ಬಗ್ಗೆಯೇ ಹೆಚ್ಚಿಗೆ ಗಮನ ಹರಿಸಿದರೆ ರೋಗಿಗಳ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಕಡಿಮೆಯಾಗುವ ಆತಂಕವಿದೆ. ಆದ್ದರಿಂದ ಸರಕಾರಗಳು ಮಹಿಳಾ ವೈದ್ಯರಿಗೆ ಸುಸೂತ್ರವಾಗಿ ಕೆಲಸ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಭಾರತಿಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ರವಿ ಬಿರಾದಾರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು 77 ವರ್ಷ ಕಳೆದರೂ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಕನಸಿನ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು, ಭ್ರೂಣಹತ್ಯೆಯಿಂದ ಪ್ರಾರಂಭವಾಗಿ ಎಲ್ಲ ವಯೋಮಾನದ ಮಹಿಳೆಯರ ಮೇಲೂ ಆಗಾಗ ನಡೆಯುತ್ತಿರುತ್ತವೆ. 12ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸಿದ್ದಾರೆ. ಆದರೆ, ನಮ್ಮ ಸರಕಾರಗಳು ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿ ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಕಠಿಣ ಕಾನೂನುಗಳನ್ನು ಜಾರಿಗೆ ತಂದು ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಲು ಮುಂದಾಗಬೇಕು. ಅಲ್ಲದೇ, ಭಾರತೀಯ ವೈದ್ಯಕೀಯ ಸಂಘದ ಕೇಂದ್ರ ಕಚೇರಿ ನೀಡಿರುವ ಕರೆಯಂತೆ ಕೊಲ್ಕತ್ತ ಘಟನೆ ಖಂಡಿಸಿ ದೇಶಾದ್ಯಂತ ವೈದ್ಯರು ಆ.17 ರಂದು ಬೆಳಗ್ಗೆ 6 ಗಂಟೆಯಿಂದ ಆ.18 ಬೆಳಗ್ಗೆ 6 ಗಂಟೆಯವರೆಗೆ ವಿಜಯಪುರ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಹೊರರೋಗಿ ಸೇವೆಗಳು ಬಂದ್ ಇರುತ್ತವೆ. ತುರ್ತ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು. ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ಜಿಲಾನಿ ಅವಟಿ ಮಾತನಾಡಿ, ಕೊಲ್ಕತ್ತ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೇ, ಈ ಪ್ರಕರಣದ ಕುರಿತು ಕೂಲಂಕಷ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂಥ ಘಟನೆ ತಪ್ಪಿಸಲು ಜಾಗೃತಿ ಮೂಡಿಸಬೇಕು ಎಂದರು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ದಯಾನಂದ ಬಿರಾದಾರ, ಡಾ.ಸುರೇಶ ಕಾಗಲಕರ ನಾನಾ ವೈದ್ಯಕೀಯ ವಿದ್ಯಾರ್ಥಿಗಳು ಮಾತನಾಡಿದರು.ನಗರದ ವೈದ್ಯರಾದ ಡಾ.ನಳಿನಿ ಭಾಗಲಕೋಟಕರ, ಡಾ.ಸುರೇಖಾ ಹಿಪ್ಪರಗಿ, ಡಾ.ರೇಖಾ ಹಿಪ್ಪರಗಿ, ಡಾ.ಜಯಶ್ರೀ ಸಜ್ಜನರ, ಡಾ.ರಾಜಶ್ರೀ ಅಕ್ಕಿ, ಡಾ.ಸುಮೆದಾ ಕಟ್ಟಿ, ಡಾ.ಮಾಧುರಿ ಪಾಟೀಲ, ಡಾ.ಜ್ಯೋತಿ ಕೊರಬು, ಡಾ.ಪ್ರಿಯಾಂಕಾ, ಡಾ.ಗೌರಂಬಾ ಸಜ್ಜನ, ಡಾ.ಶೋಭಾ ಗುಡದಿನ್ನಿ, ಡಾ.ರಾಜಶ್ರೀ ಯಲಿವಾಳ, ಡಾ.ಟಿ.ಪಿ.ನಾಯ್ದು, ಡಾ.ವಿದ್ಯಾ ಥೊಬ್ಬಿ ಡಾ.ಪ್ರಿಯದರ್ಶಿನಿ ಪಾಟೀಲ, ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಉಪಪ್ರಾಚಾರ್ಯ ಡಾ.ಆನಂದ ಪಾಟೀಲ, ಡಾ.ಕೃತಿಕಾ ನಾಗುರ, ಡಾ.ಮುತ್ತು ಗುಡದಿನ್ನಿ, ಡಾ.ಆರ್.ಎಂ.ಸಜ್ಜನ, ಡಾ.ಮುದನೂರ, ಡಾ.ಅನಿಕೇತನ ವಲಭ, ಡಾ.ವಿಜಯಕುಮಾರ ವಾರದ, ಡಾ.ಶೆಟ್ಟಿ, ಡಾ.ಉದಯ ನುಚ್ಚಿ, ಡಾ.ಸಿ.ಎಂ.ಕುಲಕರ್ಣಿ, ಡಾ.ವಲ್ಲಭ, ಡಾ.ಗೋಸಾವಿ, ಡಾ.ರಾಘವೇಂದ್ರ ಇಜೇರಿ, ಡಾ.ಶ್ರೀನಿವಾಸ ರಾಯ್ಕರ, ಡಾ.ಭೀಮನಗೌಡ ಬಿರಾದಾರ, ಡಾ.ಸಂದೀಪ ನಾಯಕ, ಡಾ.ಸಂತೋಷ ನಂದಿ, ಡಾ.ಗಿರೀಶ ಕುಲ್ಲೊಳ್ಳಿ, ಡಾ.ಮಂಜುನಾಥ ಕೋಟೆಣ್ಣವರ, ಡಾ.ಮನೋವಿಜಯ ಕಳಸಗೊಂಡ, ಡಾ.ಪರೀಕ್ಷಿತ್ ಕೋಟಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!