ಆಜಾದ್‌ಪಾರ್ಕ್ ವೃತ್ತದವರೆಗೂ ಎಐಟಿಯುಸಿ, ಪ್ಲಾಂಟೇಷನ್ ಯೂನಿಯನ್, ಬಿಸಿಯೂಟ-ಅಂಗನವಾಡಿ ಕಾರ್ಯಕರ್ತೆಯರ ಮೆರವಣಿಗೆ
ಕಾರ್ಮಿಕ ವಿರೋಧಿ ನಡೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಎಐಟಿಯುಸಿ, ಪ್ಲಾಂಟೇಷನ್ ಯೂನಿಯನ್, ಬಿಸಿಯೂಟ-ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನೂರಾರು ಕಾರ್ಮಿಕರು ಧರಣಿ ನಡೆಸಿ, ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಹಲವರನ್ನು ವಶಕ್ಕೆ ಪಡೆದರು.
ಕಾರ್ಮಿಕರ, ಮಹಿಳೆಯರ, ರೈತರ, ಯುವಜನರ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಸರ್ಕಾರಗಳ ವಿರುದ್ಧ ವಿವಿಧ ಸಂಘಟನೆಗಳು ಕರೆ ನೀಡಿದ್ಧ ಪ್ರತಿಭಟನೆ ಅಂಗವಾಗಿ ಗುರುವಾರ ತಾಲೂಕು ಕಚೇರಿಯಿಂದ ಆಜಾದ್‌ಪಾರ್ಕ್ ವೃತ್ತದವರೆಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ ಕಾರ್ಯಕರ್ತರ ಮುತ್ತಿಗೆ ಯತ್ನವನ್ನು ಪೊಲೀಸರು ತಡೆಹಿಡಿದರು.ಪ್ಲಾಂಟೇಷನ್ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮರಾಜ್, ದೇಶದಲ್ಲಿ ಶೇ.90ರಷ್ಟು ದುಡಿಯುವ ಜನರಿಗೆ ಸರ್ಕಾರಗಳು ಜನವಿರೋಧಿ ಕಾನೂನು ಕಾಯ್ದೆಗಳಡಿ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಈ ವಿರುದ್ಧ ಧ್ವನಿಗೂಡಿಸುವ ಪ್ರತಿಭಟನಾ ಕಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕೇಂದ್ರದ ಹೊಸ ಕಾರ್ಮಿಕ ಕಾಯ್ದೆಯಲ್ಲಿ ಪ್ರತಿ ಕಾರ್ಮಿಕರಿಗೆ ಇಂದಿನ ಬೆಲೆ ಏರಿಕೆ ನಡುವೆ ನಿಗದಿಗೊಳಿಸಿದ ₹178 ಗಳಲ್ಲಿ ಜೀವನ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಕಾಯ್ದೆ ಕಾರ್ಮಿಕರಿಗೆ ನಷ್ಟವಾಗಿ ದೊಡ್ಡ ದೊಡ್ಡ ಉದ್ಯಮಿ, ಕಾರ್ಪೋರೇಟ್‌ಗಳಿಗೆ ಲಾಭ ಮಾಡಿಕೊಡಲಿವೆ. ಈ ಬಗ್ಗೆ ಕೇಂದ್ರ ಸರ್ಕಾರ ಮರು ಚಿಂತನೆ ಮಾಡಬೇಕಿದೆ ಎಂದರು.
ಕೇಂದ್ರ ಸರ್ಕಾರದಂತೆ ರಾಜ್ಯಸರ್ಕಾರ ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೂ ಮುನ್ನ ಕಾರ್ಮಿಕರಿಗೆ 6ನೇ ಗ್ಯಾರಂಟಿ ಘೋಷಣೆ ಮಾಡಿತು. ಆದರೆ ಎರಡೂವರೆ ವರ್ಷ ಕಳೆದರೂ ಕಾರ್ಮಿಕರಿಗೆ ಗ್ಯಾರಂಟಿ ಭಾಗ್ಯ ಲಭ್ಯವಾಗಲಿಲ್ಲ. ಉಳ್ಳವರ ಮಕ್ಕಳು ಪದವೀಧರರಾದರೆ, ಕಾರ್ಮಿಕರ ಮಕ್ಕಳು ಕಾರ್ಮಿಕರಾಗೇ ಉಳಿದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಸರ್ಕಾರದ ದ್ವಂದ ನಿಲುವು, ರೈತ-ಕಾರ್ಮಿಕರ ವಿರೋಧಿ ಕಾಯ್ದೆಗಳ ಬಗ್ಗೆ ಜನತೆ ಎಚ್ಚೆತ್ತು ಚಳುವಳಿ ನಡೆಸ ದಿದ್ದಲ್ಲಿ ಮುಂದೊಂದು ದಿನ ಸಂಪೂರ್ಣ ದೇಶವನ್ನು ವಿದೇಶಕ್ಕೆ ಮಾರಾಟ ಮಾಡುವ ಮೂಲಕ ವಿದೇಶಿಗರ ಆಳ್ವಿಕೆಯಲ್ಲಿ ದೇಶದ ಪ್ರಜೆಗಳು ಮತ್ತೊಮ್ಮೆ ಗುಲಾಮರಂತೆ ಜೀವಿಸಬೇಕು ಎಂದು ಎಚ್ಚರಿಸಿದರು.
ಕಾರ್ಮಿಕ ವಿರೋಧಿ ನಡೆ ಅನುಸರಿಸುತ್ತಿರುವ ಸರ್ಕಾರಗಳ ವಿರುದ್ಧ ಗುರುವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಎಐಟಿಯುಸಿ ಸೇರಿದಂತೆ ವಿವಿಧ ಸಂಘಟನೆ ಕಾರ್ಯಕರ್ತರು ನಗರದ ಮುಖ್ಯರಸ್ತೆಯಲ್ಲಿ ರ್‍ಯಾಲಿ ನಡೆಸಿದರು.