ಕನ್ನಡಪ್ರಭ ವಾರ್ತೆ ಕಲಬುರಗಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ರೂಪಿಸಿರುವುದು ಅವೈಜ್ಞಾನಿಕ ನೀತಿ ಎಂದು ಖಂಡಿಸಿದರಲ್ಲದೆ ಇದರಿಂದ ಲಂಬಾಣಿ, ಕೊರಮ, ಕೊರಚ, ಬೋವಿ ಸಮಾಜಕ್ಕೆ ಅನ್ಯಾಯವಾಗಿದೆ. ನಮ್ಮ ಸಮಾಜಗಳನ್ನೇ ತುಳಿಯುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದರು.
ನಾಗಮೋಹನ ದಾಸ್ ವರದಿ ಶಿಫಾರಸು ಕೈಬಿಡಬೇಕು, ಈ ವರದಿಯಲ್ಲಿ ಅನೇಕ ತಪ್ಪುಗಳಿವೆ. ಮಾಧುಸ್ವಾಮಿ ವರದಿಯನ್ನು ಜಾರಿಗೆ ತರಬೇಕು ಎಂಬುದೇ ತಮ್ಮ ಆಗ್ರಹವೆಂದರು.ಮೀಸಲಾತಿಯಲ್ಲಿ ಲಂಬಾಣಿ ಸಮಾಜದವರೇ ಹೆಚ್ಚಿನ ಲಾಭ ಪಡೆದಿದ್ದಾರೆಂದು ಬಿಂಬಿಸಲಾಗುತ್ತಿದೆ. ಇದು ತಪ್ಪು. ಲಂಬಾಣಿ, ಕೊರಮ, ಕೊರಚ, ಬೋವಿ ಸಮಾಜಗಳಿಗೆ ಮೀಸಲಾತಿ ಲಾಭ ಇನ್ನೂ ಪರಿಪೂರ್ಣ ದೊರಕಿಲ್ಲ. ಇದೀಗ ಒಳ ಮೀಸಲಾತಿಯಲ್ಲಿ ರಾಜ್ಯ ರೂಪಿಸಿರುವ ಸೂತ್ರದ ಪ್ರಕಾರ ನೋಡಿದರೆ ನಾವೆಲ್ಲರೂ ಪರಸ್ಪರ ಜಗಳ ಮಾಡುವಂತೆ ಮಾಡಿದ್ದಾರೆಂದು ಬಾಬೂರಾವ ಚವ್ಹಾಣ್ ದೂರಿದರು.
ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ ಬಂಜಾರಾ, ಕೊರಮ, ಕೊರಚ, ಭೋವಿ, ಅಲೆಮಾರಿ, ಅರೆ ಅಲೆಮಾರಿ ಸೇರಿದಂತೆ 1 ಕೋಟಿ 8 ಲಕ್ಷ ಜನಸಂಖ್ಯೆ ಇದೆ. ಇದು ಒಟ್ಟಾರೆ ಶೇ.18 ಕ್ಕೆ ಸಮ. ಪರಿಶಿಷ್ಟರ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ.17ರಿಂದ ಶೇ.18ಕ್ಕೆ ಹೆಚ್ಚಿಸಲು ನಮ್ಮ ಒತ್ತಾಯವಿದೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿಯಲ್ಲಿ ಸಿ ವಿಭಾಗಕ್ಕೆ ಅಸಂವಿಧಾನಿಕವಾಗಿ ಸ್ಪರ್ಶ ಎಂಬ ಪದ ಬಳಸಲಾಗಿದೆ. ಇದು ತಕ್ಷಣ ಕೈಬಿಡಬೇಕು, ಈ ಜಾಗದಲ್ಲಿ ವಿಮುಕ್ತ ಸಮುದಾಯಗಳೆಂದು ಪದ ಬಳಸಲಿ ಎಂದು ಡಾ. ಜಾಧವ ಆಗ್ರಹಿಸಿದರು.
ಸಿದ್ರಾಮ ದಂಡಗುಲಕರ್, ರಾಮಣ್ಣ ಪರೀಟ್, ಪೇಂ ಸಿಂಗ್, ಈರಣ್ಣ ರಾವೂರಕರ್, ರಾಮಯ್ಯ ಪೂಜಾರಿ, ವೀರಣ್ಣ, ಶ್ಯಾಮರಾಯ ಪವಾರ್ ಸೇರಿದಂತೆ ಎಲ್ಲಾ ಸಮಾಜ ಮುಖಡರಿದ್ದರು.
ಕಲಬುರಗಿಯಲ್ಲಿ ಸೆ. 8 ರಂದು ನಗರದ ಜಗತ್ ವೃತ್ತದಿಂದ ಪಟೇಲ್ ವೃತ್ತದವರೆಗೂ ಸಾವಿರಾರು ಸಂಖ್ಯೆಯಲ್ಲಿ ಎಲ್ಲಾ ಸಮಾಜದವರು ಸೇರಿಕೊಂಡು ಹೋರಾಟ ಮಾಡಲಾಗುತ್ತದೆ. ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿ ಆಗಲಿದ್ದಾರೆ. ಈ ಸಮಯದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದೂ ಬಾಬೂರಾವ ಚವ್ಹಾಣ್ ಹೇಳಿದ್ದಾರೆ.