- ಜಿಲ್ಲಾ ಸಚಿವ, ಅಧಿಕಾರಿಗಳ ವಿರುದ್ಧ ಹಗುರ ಹೇಳಿಕೆ ಸಲ್ಲದು: ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಶೆಟ್ಟಿ ಆಕ್ರೋಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯ ಸರ್ಕಾರಿ ಅಧಿಕಾರಿಗಳು, ಜಿಲ್ಲಾ ಮಂತ್ರಿಗಳನ್ನು ಅವಾಚ್ಯವಾಗಿ, ಕೇವಲವಾಗಿ ನಿಂದಿಸುತ್ತಿರುವ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಬಿಜೆಪಿ ಮುಖಂಡರ ದ್ವೇಷ ರಾಜಕೀಯ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಹರಿಹರದಲ್ಲಿ ಜ.24ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ಹರಿಹರದ ಶ್ರೀ ಪಕ್ಕೀರ ಸ್ವಾಮಿ ಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದರು.
ಶಾಸಕ ಬಿ.ಪಿ.ಹರೀಶ ಹರಿಹರ ಕ್ಷೇತ್ರ ಅಭಿವೃದ್ಧಿ, ಜನರ ಸಮಸ್ಯೆಗೆ ಸ್ಪಂದಿಸಬೇಕು. ಆದರೆ, ಜಿಲ್ಲಾ ಸಚಿವರು, ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಮೊನ್ನೆ ದಾವಣಗೆರೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ, ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡುವಾಗಲೂ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಗ್ಗೆ ಇಲ್ಲಸಲ್ಲದ ಆರೋಪ ಸರಿಯಲ್ಲ. ನಿತ್ಯವೂ ಎಸ್.ಎಸ್. ಮಲ್ಲಿಕಾರ್ಜುನ ಜೊತೆಗೆ ಫೋಟೋ ತೆಗೆಸಿಕೊಳ್ಳಲೆಂದೇ 500-600 ಜನ ಬರುತ್ತಾರೆ. ಹಾಗೆ ಬಂದವರಲ್ಲಿ ಯಾರು ಏನೆಲ್ಲಾ ಮಾಡುತ್ತಾರೆಂದು ಕೇಳಲಾಗುತ್ತದೆಯೇ? ಹೀಗೆ ಫೋಟೋ ತೆಗೆಸಿಕೊಂಡ ಕೆಲವರು ವಿವಿಧ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೇ ಬಿಜೆಪಿ ಯಶವಂತ ರಾವ್ ಜಾಧವ್ ಜೊತೆಗೆ ಯಾರಾದರೂ ಫೋಟೋ ತೆಗೆಸಿಕೊಂಡವರು ಸೆಕೆಂಡ್ಸ್, ಥರ್ಡ್ಸ್ ದಂಧೆ ಮಾಡಿ, ಸಿಕ್ಕಿ ಬಿದ್ದರೆ ಯಶವಂತ ರಾವ್ ಬೆಂಬಲಿಗರು ಅಂತಾ ಅರ್ಥವೇ? ಫೋಟೋ ತೆಗೆಸಿಕೊಂಡವರು ತಪ್ಪು ಮಾಡಿ ಸಿಕ್ಕಿ ಬಿದ್ದರೆ ಯಶವಂತ ರಾವ್ ಹೊಣೆಗಾರನಾಗಲೀ, ತಪ್ಪಿತಸ್ಥನಾಗಲೀ ಅಲ್ಲ ಎಂದರು.
- - -
- ದಿನೇಶ ಕೆ.ಶೆಟ್ಟಿ, ದೂಡಾ ಅಧ್ಯಕ್ಷ.
-22ಕೆಡಿವಿಜಿ1: ದಾವಣಗೆರೆಯಲ್ಲಿ ಗುರುವಾರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಬಿಜೆಪಿ ಮುಖಂಡರ ನಡೆ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.