ಕೊಪ್ಪಳ: ಕುಣಿಕೇರಿ ಗ್ರಾಮದ ಕೆರೆಯ ಮಣ್ಣನ್ನು ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಮತ್ತು ಮಣ್ಣು ಮಾರಾಟಕ್ಕೆ ನೀಡಿರುವ ಅನುಮತಿ ರದ್ಧು ಮಾಡುವಂತೆ ಆಗ್ರಹಿಸಿ ಕೆರೆಯ ದಡದಲ್ಲಿಯೇ ಕುಣಿಕೇರಿ ಗ್ರಾಮ ನಾಗರಿಕ ವೇದಿಕೆ ಹಾಗೂ ಕರ್ನಾಟಕ ರೈತ ಸಂಘ ಸೇರಿದಂತೆ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಕುಣಿಕೇರಿ ದೊಡ್ಡ ಕೆರೆ ಹಾಗೂ ಚಿಕ್ಕ ಕೆರೆಯ ಹೂಳು ಮಣ್ಣು ತುಂಬಾ ಫಲವತ್ತತೆ ಇದ್ದು, ರೈತರ ಹೊಲಕ್ಕೆ ಅನುಕೂಲಕರ ಇರುತ್ತದೆ. ಇದನ್ನು ರೈತರಿಗೆ ನೀಡದೆ ಅಕ್ರಮವಾಗಿರುವ ಇಟ್ಟಿಗೆ ಬಟ್ಟಿ ದಂಧೆ ಮಾಡುವವರಿಗೆ ನೀಡಲಾಗುತ್ತದೆ. ಆದ ಕಾರಣ ಯಾವುದೇ ಅಕ್ರಮ ಚಟುವಟಿಕೆಗೆ ಫಲವತ್ತತೆಯ ಮಣ್ಣನ್ನು ತೆಗೆದುಕೊಳ್ಳಲು ಅನುಮತಿ ನೀಡಬಾರದೆಂದು ಆಗ್ರಹಿಸಲಾಯಿತು.
ಧರಣಿ ಸತ್ಯಾಗ್ರಹದಲ್ಲಿ ಪ್ರಗತಿಪರ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್. ಪೂಜಾರ್, ಕೆ.ಬಿ. ಗೋನಾಳ, ಗಾಳೆಪ್ಪ ಮುಂಗೋಲಿ, ಬಸವರಾಜ ನರೆಗಲ್, ಮುದುಕಪ್ಪ ಹೊಸಮನಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.