ಎಸ್ಟಿ ಸಮಾಜಕ್ಕೆ ಇತರ ಜಾತಿ ಸೇರಿಸದಂತೆ ಪ್ರತಿಭಟನೆ

KannadaprabhaNewsNetwork |  
Published : Sep 26, 2025, 01:00 AM IST
ಮ | Kannada Prabha

ಸಾರಾಂಶ

ಎಸ್ಟಿ ಸಮಾಜಕ್ಕೆ ಯಾವುದೇ ಇತರ ಜಾತಿಗಳನ್ನು ಸೇರಿಸಿ ನಮ್ಮ ಹಕ್ಕುಗಳನ್ನು ಮೊಟಕುಗೊಳಿಸದಂತೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಮುಖಂಡರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬ್ಯಾಡಗಿ: ಎಸ್ಟಿ ಸಮಾಜಕ್ಕೆ ಯಾವುದೇ ಇತರ ಜಾತಿಗಳನ್ನು ಸೇರಿಸಿ ನಮ್ಮ ಹಕ್ಕುಗಳನ್ನು ಮೊಟಕುಗೊಳಿಸದಂತೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಮುಖಂಡರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪಟ್ಟಣದ ವಾಲ್ಮೀಕಿ ನಗರದಲ್ಲಿನ ಮಾರಿಕಾಂಬಾ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಳಿಕ ತಹಸೀಲ್ದಾರ್ ಕಚೇರಿಯನ್ನು ತಲುಪಿತು. ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಶಿವಾನಂದ ಯಮನಕ್ಕನವರ, ಹಲವಾರು ವರ್ಷಗಳ ಹೋರಾಟ ನಂತರ ಎಸ್ಟಿ ಸಮುದಾಯ ಒಳಮೀಸಲಾತಿ ಪಡೆದುಕೊಂಡಿದೆ. ಅಂಬೇಡ್ಕರ್ ನಮಗೆ ನೀಡಿದ ಹಕ್ಕುಗಳನ್ನು ಧಕ್ಕೆ ಬರುವಂತೆ ಪ್ರಸ್ತುತ ಸರ್ಕಾರ ನಡೆದುಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಬಲಿಷ್ಠ ಸಮುದಾಯಗಳು ಸಹ ಸರ್ಕಾರದ ಯೋಜನೆಗಳ ಲಾಭ ಪಡೆಯಲು ನಮ್ಮನ್ನೂ ಎಸ್ಟಿಗೆ ಸೇರಿಸಿ ಎಂದು ಹೋರಾಟ ನಡೆಸುತ್ತಿವೆ. ಇದು ನಮ್ಮನ್ನು ತುಳಿಯುವ ಹುನ್ನಾರ, ಒಂದು ವೇಳೆ ಇದಕ್ಕೆ ಒಪ್ಪಿಸುವಂತಹ ಕೆಲಸಕ್ಕೆ ಸರ್ಕಾರ ಕೈ ಹಾಕಿಸಿದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.ನಮ್ಮ ಅಸ್ತಿತ್ವಕ್ಕೆ ಧಕ್ಕೆ: ಹೊನ್ನೂರಪ್ಪ ಕಾಡಸಾಲಿ ಮಾತನಾಡಿ, ಎಸ್.ಟಿ. ಸಮುದಾಯ ಈಗಾಗಲೇ ಶೇ.7ರಷ್ಟು ಮೀಸಲಾತಿ ಹಕ್ಕುಗಳನ್ನು ಹೊಂದಿದೆ. ಒಂದು ವೇಳೆ ಇತರೆ ಜಾತಿಯ ಜನರು ಇದರಲ್ಲಿ ಸೇರಿಕೊಂಡಲ್ಲಿ ನಮ್ಮ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಲಿದೆ. ಇದರೊಟ್ಟಿಗೆ ರಾಜಕೀಯ ಅವ್ಯವಸ್ಥೆ ಆರಂಭವಾಗಲಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಮಣ್ಣು ಪಾಲಾಗಲಿದ್ದು ಕೂಡಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದರು.ರಾಜಕೀಯ ಪ್ರಭಾವ: ರಾಮಣ್ಣ ಕೋಡಿಹಳ್ಳಿ ಮಾತನಾಡಿ, ಎಸ್.ಟಿ. ಜಾತಿಗೆ ಕುರುಬ ಸಮಾಜ ಸೇರ್ಪಡೆ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಹಿತಾಸಕ್ತಿ ಕಾರಣ ಎಂದು ಸ್ಪಷ್ಟವಾಗಿದೆ. ಇದು ಅಂಗೈ ಹುಣ್ಣಿನಷ್ಟೆ ಸತ್ಯ ಅವರು ತಮ್ಮ ಸಮುದಾಯಕ್ಕೆ ಲಾಭ ಮಾಡಲು ಇದನ್ನು ಜಾರಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಶಿವರಾಮ ಹೊನ್ನಾಳ್ಳಿ, ಮಲ್ಲೇಶಪ್ಪ ಹೊಳಗುಂದಿ, ಹನುಮಂತಪ್ಪ ಭೈರಾಪುರ, ಶಿವಪ್ಪ ಅಂಬಲಿ, ಪ್ರಕಾಶ ಬಣಕಾರ, ನಾಗಲಿಂಗಪ್ಪ ತಳವಾರ, ಮಂಜುನಾಥ ಕಳಗೊಂಡ, ಪರಶುರಾಮ ಓಲೇಕಾರ, ರಾಘು ವಾಲ್ಮೀಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ