- ಅಂಗಡಿಯೊಳಗೆ ಭರ್ಜರಿ ಪೂಜೆ, ಹೊರಗೆ ಮಹಿಳೆಯರಿಂದ ಧಿಕ್ಕಾರಗಳ ಘೋಷಣೆ
ಕನ್ನಡಪ್ರಭ ವಾರ್ತೆ ಹರಿಹರ
ಇಲ್ಲಿಗೆ ಸಮೀಪದ ಕೋಡಿಯಾಲ ಗ್ರಾಮ ಮಧ್ಯದಲ್ಲಿ ಹಾದುಹೋಗಿರುವ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ಸಿ.ಎಲ್-೪ ಮದ್ಯ ಮಾರಾಟ ಅಂಗಡಿ ಆರಂಭಿಸಿದ್ದು, ಕೂಡಲೇ ಬಂದ್ ಮಾಡಬೇಕು ಎಂದು ಆಗ್ರಹಿಸಿ, ಡಾ. ಬಿ.ಆರ್. ಅಂಬೇಡ್ಕರ್ ಯುವ ಸಮಿತಿ ಜಿಲ್ಲಾ ಕಾರ್ಯಕರ್ತರು ಗುರುವಾರ ಮದ್ಯದಂಗಡಿ ಎದುರು ಪ್ರತಿಭಟಿಸಿ. ಜಿಲ್ಲಾ ಅಬಕಾರಿ ಉಪ ಅಧಿಕ್ಷಕ ಶೇಖರಪ್ಪ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಮಿತಿ ಜಿಲ್ಲಾಧ್ಯಕ್ಷ ಕೆ.ಆರ್. ಉಮೇಶ್ ಮಾತನಾಡಿ, ಕೋಡಿಯಾಲ (ಕುಮಾರಪಟ್ಟಣ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೪ರಿಂದ ೫ ಸಾವಿರ ಜನಸಂಖ್ಯೆ ಇದೆ. ನಿಯಮಗಳ ಉಲ್ಲಂಘಿಸಿ ತೆರೆದಿರುವ ಸಿ.ಎಲ್-೪ ಮಧ್ಯ ಮಾರಾಟ ಅಂಗಡಿ ಗ್ರಾಮಸ್ಥರಿಗೆ ಮಾರಕವಾಗಿದೆ. ಸ್ಥಳೀಯರು ಮದ್ಯದ ದಾಸರಾಗಲು ಕಾರಣವಾಗುತ್ತದೆ. ಆದಕಾರಣ ಮದ್ಯದಂಗಡಿ ತಕ್ಷಣವೇ ಬಂದ್ ಮಾಡಬೇಕೆಂದರು.
ಜಿಲ್ಲಾ ಮತ್ತು ರಾಜ್ಯ ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆದು ಸನ್ನದುದಾರರು ಮದ್ಯ ಮಾರಾಟದಂಗಡಿ ಆರಂಭಿಸಿದ್ದಾರೆ. ಮದ್ಯದಂಗಡಿಯಲ್ಲಿ ಇರಿಸಲಾಗಿದ್ದ ವಿವಿಧ ಕಂಪನಿಗಳ ತರಹೇವಾರಿ ಮದ್ಯದ ಬಾಟಲಿಗಳಿಗೆ ಹೂ ಮಾಲೆ ಹಾಕಿ, ಗಣೇಶ, ಲಕ್ಷ್ಮೀ, ಸರಸ್ವತಿ ಪೋಟೋ, ತಂಬಿಗೆಯಲ್ಲಿ ಜಲ ತುಂಬಿ, ತಳಿರು ತೋರಣ ಕಟ್ಟಿ, ಆಮಂತ್ರಿತರ ಕೈಗೆ ಕಂಕಣ ಕಟ್ಟಿ, ಸಿಹಿ ಹಂಚುತ್ತಿದ್ದರು. ಅಂಗಡಿಯಲ್ಲಿ ಪೂಜೆ ಅದ್ಧೂರಿಯಾಗಿ ನಡೆಯುತ್ತಿದ್ದರೆ. ಹೊರಗಡೆ ಧಿಕ್ಕಾರದ ಘೋಷಣೆ ಮೊಳಗಿದವು.
ಕೋಡಿಯಾಲ ಗ್ರಾಮದ ಮುಖಂಡರಾದ ನಾಗರಾಜಪ್ಪ ಹಳಳ್ಳೆಪ್ಪನವರ, ಗ್ರಾಪಂ ಮಾಜಿ ಅಧ್ಯಕ್ಷ ಕೆಕೆಜೆ ರಾಮಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆರ್‌ಆರ್‌ಬಿ ಭೀಮಣ್ಣ, ಮಾಜಿ ಸದಸ್ಯ ಕರಿಯಪ್ಪ ಮಾಳಗಿ, ಪರಮೇಶಪ್ಪ ಕರಡೆಪ್ಪನವರ, ಮುಖಂಡ ಸಂಜಿವಪ್ಪ ಕುಂದಾಪುರ, ಹನುಮಂತಪ್ಪ ಹಳಳ್ಳೆಪ್ಪನವರ, ರಾಣಿಬೆನ್ನೂರು ನಗರಸಭೆ ಮಾಜಿ ಸದಸ್ಯ ರತ್ನಾಕರ ಕುಂದಾಪುರ, ಮುಖಂಡ ರಾಜು ಅಡಿವೆಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿ, ಪ್ರತಿಭಟನೆ ಕೈ ಬಿಡಲು ಮನವೊಲಿಸಿದರು.
- - -
ಹರಿಹರ ಸಮೀಪದ ಕೋಡಿಯಾಲ ಗ್ರಾಮದಲ್ಲಿ ನೂತನ ಸಾರಾಯಿ ಅಂಗಡಿ ಆರಂಭ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.