ದಯಾನಂದ ಸಾಗರ್ ಆಸ್ಪತ್ರೆ ಬಳಿ ಮುನಿರತ್ನ ವಿರುದ್ಧ ಪ್ರತಿಭಟನೆ

KannadaprabhaNewsNetwork | Published : Sep 21, 2024 1:52 AM

ಸಾರಾಂಶ

ಶಾಸಕ ಮುನಿರತ್ನ ಅವರನ್ನು ವೈದ್ಯಕೀಯ ಪರೀಕ್ಷೆಗೆ ರಾಮನಗರದ ಹಾರೋಹಳ್ಳಿಯ ದಯಾನಂದ ಸಾಗರ್ ಆಸ್ಪತ್ರೆಗೆ ಕರೆತಂದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

-ಆಸ್ಪತ್ರೆಯ ಗೇಟ್ ಬಳಿ ಜಮಾಯಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಮುನಿರತ್ನ ವಿರುದ್ಧ ಆಕ್ರೋಶಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು ಪರಪ್ಪನ ಅಗ್ರಹಾರದಿಂದ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿ ಅತ್ಯಾಚಾರ ಮತ್ತು ಹನಿಟ್ರ್ಯಾಪ್‌ ಪ್ರಕರಣದಲ್ಲಿ ಬಂಧಿತರಾದ ಶಾಸಕ ಮುನಿರತ್ನ ಅವರನ್ನು ವೈದ್ಯಕೀಯ ಪರೀಕ್ಷೆಗೆ ಹಾರೋಹಳ್ಳಿಯ ದಯಾನಂದ ಸಾಗರ್ ಆಸ್ಪತ್ರೆಗೆ ಕರೆತಂದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ ನಂತರ ಮುನಿರತ್ನ ಅವರನ್ನು ಪೊಲೀಸರು ಬಿಗಿ ಬಂದೋಬಸ್ತಿನಲ್ಲಿ ಠಾಣೆ ಪಕ್ಕದಲ್ಲಿಯೇ ಇರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುನಿರತ್ನ ಅವರಿಗೆ ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಲಾಯಿತು. ಆನಂತರ ಹಾರೋಹಳ್ಳಿಯಲ್ಲಿನ ದಯಾನಂದ ಸಾಗರ್ ಆಸ್ಪತ್ರೆಗೆ ಕರೆತಂದರು. ಈ ವೇಳೆ ಆಸ್ಪತ್ರೆಯ ಗೇಟ್ ಬಳಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕಲಿಗ ಮತ್ತು ದಲಿತ ಸಮುದಾಯ ಬಗ್ಗೆ ಹೀನಾಯವಾಗಿ ಮಾತನಾಡಿರುವ ಮುನಿರತ್ನ ಅವರನ್ನು ಇಲ್ಲಿವರೆಗೂ ಬಿಜೆಪಿಯಿಂದ ಉಚ್ಛಾಟನೆ ಮಾಡಿಲ್ಲ. ಒಕ್ಕಲಿಗ ಸಮುದಾಯಕ್ಕೆ ಅವಮಾನ ಆಗುತ್ತಿದ್ದರೂ ಬಿಜೆಪಿ ನಾಯಕರು ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಒಕ್ಕಲಿಗ ನಾಯಕರು ಎನಿಸಿಕೊಂಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ನೋಡಿಕೊಂಡು ಸುಮ್ಮನೆ ಇದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರನ್ನು 20 ವರ್ಷಗಳಿಂದ ಶಾಸಕರನ್ನಾಗಿ ಮಾಡಿದ್ದೇವು. ಒಕ್ಕಲಿಗರು,ದಲಿತರು, ಅಲ್ಪಸಂಖ್ಯಾತರ ಸೇರಿದಂತೆ ಎಲ್ಲ ವರ್ಗದ ಜನರು ಸಹೋದರರಂತೆ ಬದುಕುತ್ತಿದ್ದೇವೆ. ಈಗ ಮಹಿಳೆ ಮೇಲೆ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಬಳಸಿಕೊಂಡಿರುವ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಇಷ್ಟಾದರೂ ಮುನಿರತ್ನ ವಿರುದ್ಧ ಬಿಜೆಪಿ - ಜೆಡಿಎಸ್ ನಾಯಕರು ಧ್ವನಿ ಎತ್ತುತ್ತಿಲ್ಲ. ಆ ಪಕ್ಷದಲ್ಲಿ ಶಿಸ್ತು ಎಲ್ಲಿದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಮುನಿರತ್ನ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವಾಪಸ್ ಕರೆದೊಯ್ಯುವವರೆಗೂ ದಯಾನಂದ ಸಾಗರ್ ಆಸ್ಪತ್ರೆ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಮುನಿರತ್ನ ಅವರನ್ನು ಮತ್ತೆ ಕಗ್ಗಲೀಪುರ ಠಾಣೆಗೆ ಪೊಲೀಸರು ಕರೆದೋಯ್ದರು.

Share this article