ನರೇಗಾ ಹೆಸರು ಬದಲಾವಣೆ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Dec 20, 2025, 01:30 AM IST
19ಕೆಎಂಎನ್‌ಡಿ-9ಮಳವಳ್ಳಿ ತಾಲೂಕು ಪ್ರಾಂತ ರೈತ ಸಂಘ ಪದಾಧಿಕಾರಿಗಳು ಹಲಗೂರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಯುಪಿಎ ಜಾರಿಗೊಳಿಸಿದ ಹಲವು ಯೋಜನೆಗಳಿಗೆ ಮರುನಾಮಕರಣ ಮಾಡುವುದೇ ಬಿಜೆಪಿಯ ಬಹು ದೊಡ್ಡ ಸಾಧನೆಯಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸದೆ ಬಿಜೆಪಿ ಜನಸಾಮಾನ್ಯರಿಗೆ ವಂಚನೆ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಯುಪಿಎ ಜಾರಿಗೊಳಿಸಿದ ಹಲವು ಯೋಜನೆಗಳಿಗೆ ಮರುನಾಮಕರಣ ಮಾಡುವುದೇ ಬಿಜೆಪಿಯ ಬಹು ದೊಡ್ಡ ಸಾಧನೆಯಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸದೆ ಬಿಜೆಪಿ ಜನಸಾಮಾನ್ಯರಿಗೆ ವಂಚನೆ ಮಾಡುತ್ತಿದೆ ಎಂದು ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದಿಂದ ಹಲಗೂರು ಗ್ರಾಪಂ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎನ್.ಡಿ.ಎ ನೇತೃತ್ವದ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರನ್ನು ಬದಲಿಸಿ, ವಿ.ಬಿ.ಜಿ ರಾಮ್ ಜಿ ಎಂದು ನಾಮಕರಣ ಮಾಡಿ ಮಸೂದೆಯನ್ನಾಗಿ ಮಂಡಿಸಿದ್ದು, ಇದು ಗ್ರಾಮೀಣ ಭಾಗದ ಕೂಲಿಕಾರರಿಗೆ ಮಾಡುವ ಮಹಾದ್ರೋಹ ಎಂದರು.

ಉದ್ಯೋಗ ಖಾತರಿ ಯೋಜನೆಯನ್ನು ಯಥಾವತ್ತಾಗಿ ಮುಂದುವರೆಸಬೇಕು. ನಗರ ಪ್ರದೇಶದ ಬಡಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಯೋಜನೆಯನ್ನು ನಗರ ವ್ಯಾಪ್ತಿಗೂ ವಿಸ್ತರಿಸಬೇಕು. ಪ್ರತಿ ಕುಟುಂಬಕ್ಕೆ ಕನಿಷ್ಠ 200 ದಿನಗಳ ಕೂಲಿ ಕೆಲಸ ಮತ್ತು ದಿನಕ್ಕೆ 600 ರು. ಕೂಲಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಲಿಂಗರಾಜಮೂರ್ತಿ ಮಾತನಾಡಿ, ಯೋಜನೆಯಡಿಯಲ್ಲಿ ನಡೆಸುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಹಣ ನೀಡುತ್ತಿತ್ತು. ಆದರೆ ವಿ.ಬಿ.ಜಿ ರಾಮ್ ಜೀ ಯೋಜನೆಯಲ್ಲಿ ಕೇಂದ್ರ 60 ಮತ್ತು ರಾಜ್ಯ 40 ಅನುಪಾತದಲ್ಲಿ ಅನುದಾನ ನೀಡಬೇಕೆಂದು ನಿಯಮ ಜಾರಿಗೊಳಿಸಿದೆ. ಕೃಷಿ ಋತು ಹೆಸರಿನಲ್ಲಿ ವರ್ಷದಲ್ಲಿ ೬೦ ದಿನಗಳ ಉದ್ಯೋಗ ನಿರಾಕರಿಸುವ ಅವಕಾಶ ಕಲ್ಪಿಸಿದ್ದು ಕಾಯ್ದೆಯನ್ನು ಹಳ್ಳ ಹಿಡಿಸುವ ಹುನ್ನಾರ ಅಡಗಿದೆ ಎಂದು ಅತಂಕ ವ್ಯಕ್ತಪಡಿಸಿದರು.

ಹಲಗೂರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಚೆಂದಿಲ್ ಮತ್ತು ನಾಡ ಕಚೇರಿ ಉಪ ತಹಸೀಲ್ದಾರ್ ನಟರಾಜು ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.

ಹೋಬಳಿ ಘಟಕದ ಅಧ್ಯಕ್ಷ ಎಂ.ಇ.ಮಹದೇವು, ಉಪಾಧ್ಯಕ್ಷೆ ಪ್ರಮೀಳಾ, ಮುಖಂಡರಾದ ಶಿವಕುಮಾರ್, ಗಣೇಶ್, ಕೆ.ಎನ್.ಮೂರ್ತಿ, ಶಾಂಭವಿ, ಜ್ಯೋತಿ, ಮಹದೇವಮ್ಮ, ಸಣ್ಣಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!