ಲಿಂಗಸೂಗೂರು: ಭೂಮಿ ಅಕ್ರಮ ಸಕ್ರಮ ಸಮಿತಿ ತಾಲೂಕಿನ 34 ಗ್ರಾಮಗಳ 864 ಅರ್ಜಿಗಳ ತಿರಸ್ಕಾರ ಮಾಡಿ ಭೂ ರಹಿತ ಬಡವರಿಗೆ ಮಹಾ ಮೋಸ ಮಾಡಿದೆ ಇದನ್ನು ವಿರೋಧಿಸಿ ಜನವರಿ 1ರಂದು ತಾಲ್ಲೂಕಿನ ಗುರುಗುಂಟಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಿರ್ದಿಷ್ಟ ಹೋರಾಟಕ್ಕೆ ಆಲ್ ಇಂಡಿಯಾ ಕ್ರಾಂತಿಕಾರಿ ಕಿಸಾನ್ ಸಭಾ (ಎಐಕೆಕೆಎಸ್) ಕರೆ ನೀಡಿದ್ದು, ಹೋರಾಟ ತೀವ್ರ ಸ್ವರೂಪ ಪಡೆಯಲಿದೆ. ತಾಲ್ಲೂಕು ಭೂಮಿ ಅಕ್ರಮ ಸಕ್ರಮ ಸಮಿತಿ ಅರ್ಜಿ ಸಲ್ಲಿಸಿದ ಸಾವಿರಾರು ಜನರ ಪೈಕಿ ಐದು ವರ್ಷಗಳಲ್ಲಿ ಕೇವಲ ಐದು ಜನರಿಗೆ ಮಾತ್ರ ಸಾಗುವಳಿ ಸಕ್ರಮ ನೀಡಿದ್ದು, ಭೂ ರಹಿತ ಬಕರ್ ಹುಕುಂ ಸಾಗುವಳಿದಾರರ ಕಣ್ಣು ಕೆಂಪಾಗಿಸಿದೆ. ಭೂ ರಹಿತ ಕೃಷಿ ಕೂಲಿಗಳು ಕಳೆದ 50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಕಂದಾಯ ಭೂಮಿಯನ್ನು ಸರ್ಕಾರ ಒಳಗೊಳಗೆ ಅರಣ್ಯ ಇಲಾಖೆಗೆ ವರ್ಗಾಯಿಸಿ ಅನ್ಯಾಯ ಮಾಡಿದೆ. ಒಂದೆಡೆ ಅರಣ್ಯ ಭೂಮಿ ಎಂದು ಅರ್ಜಿ ತಿರಸ್ಕರಿಸಿದರೆ, ಮತ್ತೊಂದು ಕಡೆ ರೈತರ ಸಾಗುವಳಿ ಭೂಮಿಗಿಳಿದ ಅರಣ್ಯ ಇಲಾಖೆ ಬುಲ್ಡೋಜರ್‌ಗಳ ಹರಿಸಿ ಬಡ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಭೂ ರಹಿತ ಕಷ್ಟಜೀವಿ ಸಾಗುವಳಿದಾರರಾದ ಎಸ್ಸಿ ಮತ್ತು ಎಸ್‌ಟಿ ಜನರಿಗೆ ಸರ್ಕಾರ ಹಾಗೂ ಅರಣ್ಯ ಮಾಫಿಯಗಳ ವಿರುದ್ಧ ಅನಿರ್ದಿಷ್ಟ ಹೋರಾಟಕ್ಕೆ ಕರೆ ನೀಡಿದ್ದಾರೆ. ಭೂರಹಿತ ಸಾಗುವಳಿದಾರರ ಭೂ ಬಲಿದಾನ ಬಲಿಷ್ಠ ಚಳವಳಿ ಮೂಲಕ ಸರಕಾರಿ ಭೂಮಿ ಸಾಗುವಳಿ ಪಡೆಯಲು ರೈತರು ಮುಂದಾಗಿದ್ದಾರೆ.
ಹಲವು ವರ್ಷಗಳಿಂದ ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಸರ್ಕಾರ ಭೂಮಿ ಪಟ್ಟಾ ನೀಡುತ್ತಿಲ್ಲ. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಅರಣ್ಯ ಭೂಮಿ ನೀಡುತ್ತಿದ್ದಾರೆ. ಬಡ ಭೂ ರಹಿತರಿಗೆ ಭೂಮಿ ಪಟ್ಟಾ ನೀಡಲು ಹೋರಾಟ ರೂಪಿಸಲಾಗುವುದು.
- ಆರ್.ಮಾನಸಯ್ಯ, ಹಿರಿಯ ಹೋರಾಟಗಾರ, ಲಿಂಗಸೂಗೂರು.