ಕನ್ನಡಪ್ರಭ ವಾರ್ತೆ ಚವಡಾಪುರ ಲೊಡ್ ಸೆಡ್ಡಿಂಗ್ ಹೆಸರಿನಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸುತ್ತಿರುವುದುನ್ನು ಪ್ರಾಂತ ರೈತ ಸಂಘದವರು ಖಂಡಿಸಿ ಅಫಜಲ್ಪುರ ಪಟ್ಟಣದ ಜೆಸ್ಕಾಂ ಕಚೇರಿ ಮುಂದೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ಲೊಡ್ ಸೆಡ್ಡಿಂಗ್ ಹಾಕುವ ಮೊದಲು ದಿನದಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈಗ ದಿನದಲ್ಲಿ 1 ಅಥವಾ 2 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ನೀರಾವರಿ ಆಶ್ರಿತ ಬೆಸಾಯ ಮಾಡುವ ರೈತರಿಗೆ ಭಾರಿ ಸಮಸ್ಯೆಯಾಗುತ್ತಿದೆ. ಮೊದಲೇ ಮಳೆ ಬಾರದೆ ಬೆಳೆಗಳು ಒಣಗುತ್ತಿರುವಾಗ ಜೆಸ್ಕಾಂನವರು ಹೀಗೆ ವಿದ್ಯುತ್ ಕಡಿತಗೊಳಿಸುತ್ತಿದ್ದರೆ ಅಳಿದುಳಿದ ಬೆಳೆಗಳು ಕೂಡ ಬಾಡಿ ಹೋಗಿ ರೈತರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದರು. ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಬಡದಾಳ ಮಾತನಾಡಿ, ಸರ್ಕಾರ ಮಳೆ ಕೊರತೆ ಇರುವ ಪ್ರದೇಶಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದರೆ ಸಾಲದು ಸಾಗರೋಪಾದಿಯಲ್ಲಿ ಪರಿಹಾರ ಕಾರ್ಯಗಳು ನಡೆಯಬೇಕು. ಇಲ್ಲದಿದ್ದರೆ ಅನ್ನದಾತರಿಗೆ ಬಹಳ ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರವೇ ಕಾರ್ಯೋನ್ಮೂಖವಾಗಬೇಕೆಂದು ಆಗ್ರಹಿಸಿದರು. ಬಳಿಕ ಬಸವೇಶ್ವರ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ಹೊರಟು ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ದು ದಣ್ಣೂರ, ಅಮೃತರಾವ ಪಾಟೀಲ್, ಶಿವರಾಯ ದಣ್ಣೂರ, ಸಂಜು ನೂಲಾ, ಶರಣು ಅಳ್ಳಗಿ, ಚಂದ್ರಕಾಂತ ಮಹಾಲಿಂಗಪೂರ, ಅರ್ಜುನ ಕುಂಬಾರ, ಶಾಂತು ಅಂಜುಟಗಿ, ಗುರು ಚಾಂದಕವಟೆ, ಸುರೇಶ ನೂಲಾ, ಗೌಡಪ್ಪ ಖೇಡ, ರಾಯಪ್ಪ ಮ್ಯಾಕೇರಿ ಸೇರಿದಂತೆ ಅನೇಕರು ಇದ್ದರು.