ಮೈಷುಗರ್ ಸಮುದಾಯ ಭವನಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Jun 30, 2025, 12:34 AM IST
29ಕೆಎಂಎನ್ ಡಿ26 | Kannada Prabha

ಸಾರಾಂಶ

ಮೈಷುಗರ್‌ಗೆ ಸೇರಿದ ಆಸ್ತಿಗಳನ್ನು ಒಂದೊಂದಾಗಿ ಖಾಸಗಿಯವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಸಮುದಾಯ ಭವನವನ್ನು ಸಹ ನಿರ್ವಹಿಸಲಾಗದೆ ಅದನ್ನು ಖಾಸಗಿಯವರಿಗೆ ವಹಿಸುವುದು ತೀರಾ ಅಪಮಾನಕಾರಿ ವಿಚಾರ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಗೆ ಸೇರಿದ ಸಮುದಾಯ ಭವನ, ಕಲ್ಯಾಣ ಮಂಟಪಗಳನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿರುವ ಕ್ರಮ ಖಂಡಿಸಿ ಕಾರ್ಖಾನೆ ಎದುರು ರೈತ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು.

ಮೈಷುಗರ್ ಕಾರ್ಖಾನೆಗೆ ಸೇರಿದ ಕಸಬಾ ಹೋಬಳಿಯ ಹನಕೆರೆ, ಎಸ್‌ಐ ಕೋಡಿಹಳ್ಳಿ ಮತ್ತು ಮಂಡ್ಯ ನಗರದ ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳನ್ನು ಖಾಸಗಿಯವರಿಗೆ ವಹಿಸುತ್ತಿರುವ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಮೈಷುಗರ್‌ಗೆ ಸೇರಿದ ಆಸ್ತಿಗಳನ್ನು ಒಂದೊಂದಾಗಿ ಖಾಸಗಿಯವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಸಮುದಾಯ ಭವನವನ್ನು ಸಹ ನಿರ್ವಹಿಸಲಾಗದೆ ಅದನ್ನು ಖಾಸಗಿಯವರಿಗೆ ವಹಿಸುವುದು ತೀರಾ ಅಪಮಾನಕಾರಿ ವಿಚಾರ ಎಂದು ಕಿಡಿಕಾರಿದರು.

ರೈತರ ಅನುಕೂಲಕ್ಕಾಗಿ ನಿರ್ಮಿಸಿರುವ ಭವನಗಳನ್ನು ಖಾಸಗಿಯವರಿಗೆ ವಹಿಸಿದರೆ ಇವುಗಳ ಸ್ಥಾಪನೆಯ ಮೂಲ ಉದ್ದೇಶವೇ ಹಳ್ಳ ಹಿಡಿಯಲಿದೆ. ಸಾಧ್ಯವಾದರೆ ಮೈಷುಗರ್ ಅಧ್ಯಕ್ಷರೇ ಇವುಗಳನ್ನು ಸಮರ್ಥವಾಗಿ ನಿರ್ವಹಿಸಲಿ. ಇಲ್ಲವೆ ಖಾಸಗಿಯವರಿಗೆ ವಹಿಸಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು ಮಾತನಾಡಿ, ಪ್ರಸಕ್ತ ಹಂಗಾಮಿನ ಕಬ್ಬು ಅರೆದರೆ ಇವುಗಳ ನಿರ್ವಹಣೆ ಕಷ್ಟವಲ್ಲ. ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಲೀಸ್‌ ಇಲ್ಲವೆ ಪಿಪಿಪಿ ಮಾದರಿಯಲ್ಲಿ ನೀಡುವ ಪ್ರಯತ್ನ ವಿಫಲವಾದ ಮೇಲೆ ಹಿಂಭಾಗಿಲಿನಿಂದ ಕಾರ್ಖಾನೆಯನ್ನು ಖಾಸಗೀಕರಿಸುವ ಪ್ರಯತ್ನ ನಡೆದಿದೆ. ಇದನ್ನು ಯಾವುದೆ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು.

ಕರುನಾಡ ಸೇವಕರು ಸಂಘಟನೆ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಸರ್ಕಾರ ಮತ್ತು ಮೈಷುಗರ್ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಉದ್ಯಮಗಳನ್ನು ಖಾಸಗಿಯವರಿಗೆ ಚಿಲ್ಲರೆ ದುಡ್ಡಿಗೆ ಧಾರೆ ಎರೆಯಲು ಸಿದ್ಧವಾಗಿದೆ‌. ಅಧ್ಯಕ್ಷರು ತಮಗೆ ಕೊಟ್ಟಿರುವ ಅವಕಾಶ ಬಳಸಿಕೊಂಡು ಇವುಗಳ ಸಮರ್ಥ ನಿರ್ವಹಣೆ ಮಾಡಬೇಕೆ ಹೊರತು ಅಸಹಾಯಕತೆಯಿಂದ ಖಾಸಗಿಯವರಿಗೆ ಹಸ್ತಾಂತರಿಸುವುದಲ್ಲ ಎಂದು ಲೇವಡಿ ಮಾಡಿದರು.

ಸ್ಥಳಕ್ಕೆ ಆಗಮಿಸಿದ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಧರ್ ಹನಕೆರೆ ಸಮುದಾಯ ಭವನ ಹೊರತುಪಡಿಸಿ ಉಳಿದ ಸಮುದಾಯ ಭವನಗಳನ್ನು ಖಾಸಗೀಕರಿಸುವುದಾಗಿ ತಿಳಿಸಿದರು. ಇದನ್ನು ತಿರಸ್ಕರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯೂ ಮುಖಂಡರಾದ ಸಿ.ಕುಮಾರಿ, ರೈತ ಸಂಘದ ಪುಟ್ಟಸ್ವಾಮಿ, ಗೌಡಗೆರ ಜಯರಾಂ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ