ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು: ಶಾಸಕ ಸಿ.ಸಿ. ಪಾಟೀಲ

KannadaprabhaNewsNetwork |  
Published : Jun 30, 2025, 12:34 AM IST
ಕಾರ್ಯಕ್ರಮವನ್ನು ಶಾಸಕ ಸಿ.ಸಿ.ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿಗಳು ಮೈ ಮರೆಯಬಾರದು. ಉನ್ನತ ಶಿಕ್ಷಣ ಭಾರೀ ಸವಾಲಿನಿಂದ ಕೂಡಿದ್ದು, ಈಗಿನಿಂದಲೇ ತಯಾರಿ ಆರಂಭಿಸಬೇಕು. ಪಾಲಕರು ತಮ್ಮ ಮಕ್ಕಳ ಮೇಲೆ ಒತ್ತಡ ಹಾಕದೇ, ಅವರಿಗೆ ಇಷ್ಟವಾದ ಕ್ಷೇತ್ರದಲ್ಲಿ ಬೆಳೆಯಲು ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಗದಗ: ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿಗಳು ಮೈ ಮರೆಯಬಾರದು. ಉನ್ನತ ಶಿಕ್ಷಣ ಭಾರೀ ಸವಾಲಿನಿಂದ ಕೂಡಿದ್ದು, ಈಗಿನಿಂದಲೇ ತಯಾರಿ ಆರಂಭಿಸಬೇಕು. ಪಾಲಕರು ತಮ್ಮ ಮಕ್ಕಳ ಮೇಲೆ ಒತ್ತಡ ಹಾಕದೇ, ಅವರಿಗೆ ಇಷ್ಟವಾದ ಕ್ಷೇತ್ರದಲ್ಲಿ ಬೆಳೆಯಲು ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಭಾನುವಾರ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ಪಂಚಮಸಾಲಿ ಸಮಾಜ, ಯುವ ಘಟಕ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ನಿವೃತ್ತ ನೌಕರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ಅವರ ತಂಡ ಉತ್ತಮ ಕೆಲಸ ಮಾಡಿದೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪಂಚಮಸಾಲಿ ಸಮಾಜ ದೊಡ್ಡದಿದೆ. ಆದರೆ ಒಗ್ಗಟ್ಟು ಕಡಿಮೆಯಿದೆ. ಅದರಲ್ಲೂ ಗದಗ ಜಿಲ್ಲೆಯಲ್ಲಿ ಒಗ್ಗಟ್ಟು ತೀರಾ ಕಡಿಮೆ. ಸಮಾಜದ ಏಳಿಗೆಗಾಗಿ ಹಿರಿಯರೊಂದಿಗೆ ಚರ್ಚಿಸಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುವೆ ಎಂದರು.ಸಮಾಜದಲ್ಲಿ ಭಿನ್ನಾಭಿಪ್ರಾಯ ಸಹಜ. ಅವುಗಳನ್ನು ಚರ್ಚೆ ಮಾಡಿ ಪರಿಹರಿಸಿಕೊಳ್ಳಬೇಕು. ಸಮುದಾಯ ಭವನ ನಿರ್ಮಾಣ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಭಿನ್ನಾಭಿಪ್ರಾಯವಿದೆ. ಅದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದ ಅವರು, ಸಮುದಾಯ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು 1 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೆ ಸಮಾಜದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಅದೇ ರೀತಿ ನರಗುಂದದಲ್ಲಿಯೂ ಪಂಚಮಸಾಲಿ ಸಮಾಜಕ್ಕೆ ಸರಕಾರದಿಂದ 2 ಎಕರೆ ಜಮೀನು ಮಂಜೂರು ಮಾಡಿಸಲಾಗಿದೆ. ಅಲ್ಲಿಯೂ ಶೀಘ್ರವೇ ಸುಸಜ್ಜಿತ ಮತ್ತು ವಿಶಾಲವಾದ ಸಮುದಾಯ ಭವನ ನಿರ್ಮಾಣವಾಗಲಿದೆ. ಶಾಸಕನಾಗಿ ಗರಿಷ್ಠ ಅನುದಾನ ಒದಗಿಸಿ, ನರಗುಂದದಲ್ಲಿಯೂ ಪಂಚಮಸಾಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜ ಕೃಷಿ ಬಿಟ್ಟು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಸಮಾಜದಲ್ಲಿ ಶೈಕ್ಷಣಿಕ ಪ್ರಜ್ಞೆ ಜಾಗೃತವಾಗಿದೆ. ರಾಜ್ಯದ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಸಮಾಜದ ಮಹನೀಯರು ಕಾರಣರಾಗಿದ್ದಾರೆ. ಸರಕಾರಿ ಶಾಲೆಗಳಿಗೆ ಭೂಮಿಯನ್ನು ದಾನ ಮಾಡಿದವರಲ್ಲಿ ಪಂಚಮಸಾಲಿ ಸಮಾಜದ ಜನ ಮುಂದಿದ್ದಾರೆ. ಜಾತಿ-ಮತ-ಪಂಥ ಬಿಟ್ಟು ಎಲ್ಲರೂ ಶಿಕ್ಷಣವಂತರಾಗಲಿ ಎನ್ನುವ ಮಹದಾಸೆ ಪಂಚಮಸಾಲಿ ಸಮಾಜದ್ದು ಎಂದರು.

ಈ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದು 220ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ವಿವಿಧ ಕ್ಷೇತ್ರದ ಸಾಧಕರು ಮತ್ತು ನಿವೃತ್ತ ಸರಕಾರಿ ನೌಕರರನ್ನು ಸನ್ಮಾನಿಸಲಾಯಿತು.

ಸಮಾಜದ ಮುಖಂಡರಾದ ಎಂ.ಎಸ್. ಕರಿಗೌಡ್ರ, ನಿಂಗಪ್ಪ ಫಿರೋಜಿ, ಡಾ. ಸಂಗಮೇಶ ಕೊಳ್ಳಿ, ಕೆ.ವಿ. ಗದುಗಿನ, ಕುಲಕರ್ಣಿ ವಕೀಲರು, ಮಹಾಂತೇಶ ಹಿರೇಮನಿಪಾಟೀಲ, ಅಯ್ಯಪ್ಪ ಅಂಗಡಿ, ನಿಂಗಪ್ಪ ಹುಗ್ಗಿ, ಮಂಜಣ್ಣ ಗುಡದೂರ, ಜಯಶ್ರೀ ಉಗಲಾಟದ, ಜಯಶ್ರೀ ಅಕ್ಕಿ, ಲಲಿತಾ ಗೊಳಗೊಳಕಿ, ಈರಮ್ಮ ತಾಳಿಕೋಟಿ ಇತರರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಹಿರೇಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಗಡ್ಡೆಪ್ಪನವರ ಸ್ವಾಗತಿಸಿದರು. ಗವಿಸಿದ್ದಯ್ಯ ಹಳ್ಳಿಕೇರಿಮಠ ರೈತಗೀತೆ ಹಾಡಿದರು. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.

ರಾಜಕೀಯ ಸ್ವಾರ್ಥ ಇಲ್ಲ: ಡಾ. ಸಂಗಮೇಶ ಕೊಳ್ಳಿ ಹೆಚ್ಚು ಓದಿದ ಕಾರಣಕ್ಕೆ ವೈದ್ಯರಾದರು. ಕಡಿಮೆ ಓದಿಕೊಂಡು ನಾನು ರಾಜಕಾರಣಿಯಾದೆ. ಈಗ ಅವರೂ ರಾಜಕಾರಣಿ. ಮುಂದೆ ಒಳ್ಳೆಯ ರಾಜಕೀಯ ಭವಿಷ್ಯವಿದೆ. ನಾನು ರಾಜಕಾರಣದ ಸ್ವಾರ್ಥಿ ಅಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯದಾಗಲಿ ಎಂದು ಆಶಿಸುವೆ. ಆದರೆ ಯಾರನ್ನು ತಮ್ಮ ಪ್ರತಿನಿಧಿ ಮಾಡಿಕೊಳ್ಳಬೇಕು ಎನ್ನುವುದನ್ನು ಜನ ನಿರ್ಧರಿಸುತ್ತಾರೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ