ರಾಣಿಬೆನ್ನೂರು: ಪ್ರವಾದಿ ಹಜರತ್ ಮಹ್ಮದ್ ಪೈಗಂಬರ ಕುರಿತು ಆತಂಕಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರದ ರಾಮಗಿರಿ ಮಹಾರಾಜ ಎಂಬ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸ್ಥಳೀಯ ಅಂಜುಮನ್ ಇಸ್ಲಾಂ ನೇತೃತ್ವದಲ್ಲಿ ಸೋಮವಾರ ಮುಸಲ್ಮಾನ ಬಾಂಧವರು ನಗರದಲ್ಲಿ ಪ್ರತಿಭಟಿಸಿ ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದರು. ನಗರದ ಅಂಜುಮನ್ ಉರ್ದು ಹೈಸ್ಕೂಲ್ ಮೈದಾನದಿಂದ ಹೊರಟ ಪ್ರತಿಭಟನಾಕಾರರು ಮೆಡ್ಲೇರಿ ರಸ್ತೆ, ಪುನಿತ್ ರಾಜಕುಮಾರ ಸರ್ಕಲ್, ಬಸ್‌ನಿಲ್ದಾಣ ರಸ್ತೆ, ಕೋರ್ಟ್ ಸರ್ಕಲ್, ಹಳೇ ಪಿ.ಬಿ.ರಸ್ತೆ, ಹಲಗೇರಿ ಕ್ರಾಸ್, ಕುರುಬಗೇರಿ ಕ್ರಾಸ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿದರು. ಒಂದು ಧರ್ಮ ಇನ್ನೊಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ನಿಂದಿಸುವುದಾಗಲಿ ಅಥವಾ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಯಾವ ಧರ್ಮವೂ ಬಯಸುವುದಿಲ್ಲ. ಆದರೆ ಮಹಾರಾಷ್ಟ್ರ ರಾಜ್ಯ ನಾಸಿಕ್ ಜಿಲ್ಲೆ ಮುಂಬ್ರಾ ಗ್ರಾಮದ ರಾಮಗಿರಿ ಮಹಾರಾಜ ಎಂಬ ವ್ಯಕ್ತಿಯು ನಮ್ಮ ಮುಸ್ಲಿಂ ಧರ್ಮದ ಪೈಗಂಬರ ಅವರನ್ನು ಅವರ ಸಂಪೂರ್ಣ ಹೆಸರು ಉಲ್ಲೇಖಿಸಿ ಇಲ್ಲಸಲ್ಲದ ಶಬ್ದಗಳನ್ನು ಬಳಸಿ ಬಹಿರಂಗವಾಗಿ ನಿಂದಿಸುವ ಮೂಲಕ ಸಮಸ್ತ ದೇಶದ ಮುಸ್ಲಿಂ ಧರ್ಮಿಯರ ಭಾವನೆಗಳಿಗೆ ನೋವುಂಟು ಮಾಡಿದ್ದಾನೆ. ಆದ್ದರಿಂದ ರಾಷ್ಟ್ರಪತಿಗಳು ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ವಿಫಲರಾದಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸುತ್ತವೆ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ದೇಶದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ನೆಲಸುವಂತೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಅಂಜುಮನ್ ಸಂಸ್ಥೆ ಅಧ್ಯಕ್ಷ ಏಜಾಜ್‌ಖಾನ್ ಸೌದಾಗರ, ಉಪಾಧ್ಯಕ್ಷ ಇಮ್ರಾನ್‌ಖಾನ್ ಶಿರೇದ್, ಕಾರ್ಯದರ್ಶಿ ರಫಿಕ್ ಮೆಣಸಿನಕಾಯಿ, ಖಜಾಂಚಿ ರಿಯಾಜ್ ಅಹ್ಮದ್ ಕುಪ್ಪೆಲೂರ, ಜಬಿವುಲ್ಲಾ ದಾವಣಗೆರೆ, ಬಾಷಾಸಾಬ್ ನೀಲಗಾರ, ಖ್ವಾಜಾಮೊಹಿದ್ದಿನ ಭಾವಿಕಟ್ಟಿ, ಅತಾವುಲ್ಲಾ ಉದಗಟ್ಟಿ, ಅಯಾಜ ಅಹ್ಮದ್ ಖಾಜಿ, ಅಲ್ತಾಫ್‌ಖಾನ್ ಖಂದಾರಿ, ನಜರುಲ್ಲಾ ಕಿಲ್ಲೇದಾರ, ಅಬ್ದುಲ್ ಅಲೀಮ್, ಅಹ್ಮದ್‌ಖಾನ ಜಂಬೂರ, ಶೇರುಖಾನ ಕಾಬೂಲಿ, ಅಬ್ದುಲ್ ರೆಹಮಾನಸಾಬ ದಾವಣಗೆರಿ, ಅಬ್ದುಲ್ ವಹಾಬ್ ಶಾಫಿ, ನೂರುಲ್ಲಾ ಖಾಜಿ, ಹಬಿಬುಲ್ಲಾ ಕಂಬಳಿ, ಮುನವ್ವರ ಬಾಗವಾಲೆ, ಅಬ್ಬಾಸ್‌ಖಾನ್ ಸೌದಾಗರ, ಅಜರುದ್ದಿನ್ ಭಾವಿಕಟ್ಟಿ, ಅಬ್ದುಲ್‌ಖಾದರ ಪಠಾಣ ಸೇರಿದಂತೆ ಸಹಸ್ರಾರು ಮುಸಲ್ಮಾನ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.