ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಕಾರ್‍ಯಕರ್ತರು, ಡೀಸಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಅತ್ಯಾಚಾರ, ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತವಾದ ತನಿಖೆಗಾಗಿ ಎಸ್‌ಐಟಿಗೆ ವಹಿಸಬೇಕು. ಪ್ರಕರಣವನ್ನು ದಿಕ್ಕು ತಪ್ಪಿಸಲು ಶಾಸಕರೊಬ್ಬರ ತಾಳಕ್ಕೆ ಕುಣಿಯುತ್ತಿರುವ ಡೀಸಿ, ಎಸ್ಪಿ ಅವರನ್ನು ಸೇವೆಯಿಂದ ಅಮಾನತುಪಡಿಸುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದು. ಕಾಂಗ್ರೆಸ್ ನೇತೃತ್ವದ ತಮ್ಮ ರಾಜ್ಯ ಸರ್ಕಾರ ದಲಿತರ ಮಾನ, ಪ್ರಾಣ, ಆಸ್ತಿಯನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಬೀದರ್‌ನಲ್ಲಿ ಕ್ರೀಡಾ ತರಬೇತುದಾರ ಲಖನ್ ಎಂಬ ಕಾಮಾಂಧ ದಲಿತ ಕ್ರೀಡಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೀದರ್‌ನ ಬೆಳಕುಣಿ ಗ್ರಾಮದಲ್ಲಿ ಘಟಿಸಿರುವ ಈ ಪ್ರಕರಣವನ್ನು ಶಾಸಕರೊಬ್ಬರ ಚಿತಾವಣೆಯಿಂದಾಗಿ ಜಿಲ್ಲಾ ಆಡಳಿತವೇ ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನ ನಡೆಸಿದೆ. ಮೃತ ದಲಿತ ಬಾಲಕಿ ಕಬಡ್ಡಿ ಮತ್ತು ಕುಸ್ತಿಪಟುವಾಗಿದ್ದು, ಕ್ರೀಡಾ ತರಬೇತುದಾರ ಲಖನ್ ತರಬೇತಿ ನೀಡುವ ನೆಪದಲ್ಲಿ ತನ್ನ ಮನೆ ಕೆಲಸ ಮಾಡಿಸಿಕೊಳ್ಳುವುದು, ತರಬೇತಿ ಶುಲ್ಕವಾಗಿ ₹1.30 ಲಕ್ಷ ಬೇಡಿಕೆ ಇಟ್ಟಿದ್ದನೆಂದು ಆರೋಪಿಸಿದರು.
ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಎಸ್‌ಐಟಿಗೆ ವಹಿಸಿ ತಪ್ಪಿತಸ್ಥನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ದಲಿತರ ಮಾನ- ಪ್ರಾಣ- ಆಸ್ತಿ ರಕ್ಷಣೆಗೆ ಮುಂದಾಗಬೇಕು. ಕೊಲೆಗಡುಕ ಲಖನ್ ವಿರುದ್ಧ ಫೋಕ್ಸೋ, ಅತ್ಯಾಚಾರ, ಕೊಲೆ, ಅಪಹರಣ, ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಮುಂತಾದ ಸೆಕ್ಸನ್‌ಗಳನ್ನು ಪ್ರಕರಣದಲ್ಲಿ ದಾಖಲಿಸಬೇಕು. ಸಂತ್ರಸ್ಥ ಕುಟುಂಬಕ್ಕೆ ಸರ್ಕಾರಿ ನೌಕರಿ ಮತ್ತು ಸಮರ್ಪಕ ಪುನರ್ ವಸತಿ, ಪರಿಹಾರಗಳನ್ನು ಸರ್ಕಾರ ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.