ಉಪವಿಭಾಗಾಧಿಕಾರಿ ಶ್ರವಣಕುಮಾರ ಮೂಲಕ ಸರ್ಕಾರಕ್ಕೆ ಮನವಿ
ಉತ್ತರ ಕನ್ನಡ ಉಳಿಸಿ ಹೋರಾಟ ಸಮಿತಿ ಹಾಗೂ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ಅಘನಾಶಿನಿ ನದಿ ಉಳಿಸಿ ಅಭಿಯಾನದಡಿ ಜಿಲ್ಲೆಯ ನದಿ ತಿರುವು ಯೋಜನೆ ವಿರೋಧಿಸಿ ಸೋಮವಾರ ತಾಲೂಕು ಸೌಧದೆದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪ್ರಾಕೃತಿಕವಾಗಿ ಸಂಪದ್ಭರಿತವಾದ ನಮ್ಮ ಜಿಲ್ಲೆಯನ್ನು ನಮಗೆ ಯಾವ ಸರ್ಕಾರವೂ ನಿರ್ಮಿಸಿಕೊಟ್ಟಿದ್ದಲ್ಲ. ನಮ್ಮ ಪ್ರಕೃತಿಯ ಕೊಡುಗೆಗಳನ್ನು ನಾವು ಉಳಿಸಿಕೊಳ್ಳಬೇಕು. ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆ. ಎಲ್ಲಾ ರಾಜಕೀಯ ಪಕ್ಷದ ಸರ್ಕಾರಗಳೂ ನಮ್ಮ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿ, ಬೇಡದ ಯೋಜನೆಗಳನ್ನು ಮಾತ್ರ ಹೇರಿದ್ದಾರೆ. ಇಡೀ ಜಿಲ್ಲೆಗೆ ಅನುಕೂಲವಾಗುವಂತೆ ಕುಮಟಾಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ ಎಂದರೆ ಕಾರವಾರಕ್ಕೆ ಹೋಗಿ ಎನ್ನುತ್ತಾರೆ. ಕರಾವಳಿಯಲ್ಲಿರಬೇಕಾದ ಮೀನುಗಾರಿಕೆ ವಿಶ್ವವಿದ್ಯಾಲಯ ಬಯಲುಸೀಮೆಯ ಬೀದರನಲ್ಲಿದೆ ಎಂದರು.ಈ ಯೋಜನೆಯನ್ನು ಪಕ್ಷಾತೀತವಾಗಿ ವಿರೋಧಿಸಬೇಕಾಗಿದೆ. ನಮ್ಮ ವಿದ್ಯಾರ್ಥಿ-ಯುವಪಡೆಯನ್ನು ಜಾಗೃತಗೊಳಿಸಬೇಕಿದೆ. ಕ್ಷೇತ್ರದಲ್ಲಿರುವ ೫೦೦ಕ್ಕೂ ಹೆಚ್ಚು ರೆಸಾರ್ಟ್‌ಗಳು ನಮ್ಮ ಹೋರಾಟಕ್ಕೆ ಸೇರಿಕೊಳ್ಳಬೇಕು. ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಭೇದ ಮರೆತು ಸಂಘಟಿತವಾಗುವ ನೆರೆ ಜಿಲ್ಲೆಯ ಮಾದರಿ ಬೇಕು. ನಮ್ಮೊಳಗೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎನ್ನುತ್ತಿದ್ದರೆ ಈ ಯೋಜನೆ ತಡೆಯುವುದು ಕಷ್ಟ. ನಮ್ಮ ಹೋರಾಟದಲ್ಲಿ ಕಾಂಗ್ರೆಸ್, ಜೆಡಿಎಸ್‌ನನವರೂ ಸೇರಿಕೊಳ್ಳಲಿ, ಅಧಿಕಾರ ಶಾಶ್ವತವಲ್ಲ. ಎಲ್ಲರೂ ಒಂದಾಗಿ ಲಕ್ಷಲಕ್ಷ ಸಂಖ್ಯೆಯಲ್ಲಿ ಧ್ವನಿ ಎತ್ತಬೇಕಿದೆ. ಇದಕ್ಕಾಗಿ ಎಲ್ಲ ಮಠಾಧೀಶರ ಸಹಯೋಗ ಪಡೆಯೋಣ. ಈಗಾಗಲೇ ಸಂಸದ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಹೋಗಿದೆ ಎಂದರು.
ಉತ್ತರಬ ಕನ್ನಡ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ. ಭಟ್ ಮಾತನಾಡಿ, ಜೀವನದಿ ಅಘನಾಶಿನಿ ತಿರುವು ಯೋಜನೆಯಿಂದ ಜೀವಸಂಕುಲಗಳ ಹಾಗೂ ಪ್ರಕೃತಿಯ ಸರ್ವನಾಶವಾಗಲಿದೆ. ರೈತರ, ಮೀನುಗಾರರ, ನದಿ ಆಶ್ರಿತ ಜನರ, ಕುಡಿಯುವ ನೀರಿನ ಯೋಜನೆಗಳ ಆಶ್ರಿತರಿಗೆ ಶಾಶ್ವತ ಸಮಸ್ಯೆಗಳು ಕಾಡಲಿದೆ. ಕರಾವಳಿಯ ಅಂಚಿನಿಂದ ೩೫ ಕಿಮೀ ಒಳನಾಡು ವ್ಯಾಪ್ತಿಯವರೆಗೂ ಉಪ್ಪುನೀರು ನುಗ್ಗಿ ಸಿಹಿ ನೀರಿಗಾಗಿ ಹಾಹಾಕಾರ ಎದುರಿಸಬೇಕಾಗಬಹುದು. ಜಿಲ್ಲೆಯ ಜನಜೀವನ ಹಾಗೂ ನಿಸರ್ಗ ಸಹಜತೆ ಉಳಿಸುವುದಕ್ಕೆ ಅಘನಾಶಿನಿ-ಬೇಡ್ತಿ ನದಿ ತಿರುವು ಯೋಜನೆ ತಡೆಯುವುದೊಂದೇ ದಾರಿ ಎಂದರು.ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಎನ್.ಎಸ್. ಹೆಗಡೆ, ಸಂಚಾಲಕ ಗೋಪಾಲಕೃಷ್ಣ ಹೆಗಡೆ ಇತರರು ಮಾತನಾಡಿದರು. ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ. ಸುರೇಶ ಹೆಗಡೆ, ಹೇಮಂತಕುಮಾರ ಗಾಂವಕರ, ಮಂಡಲಾಧ್ಯಕ್ಷ ಜಿ.ಐ.ಹೆಗಡೆ, ವಿನಾಯಕ ಭಟ್ ಸಂತೆಗುಳಿ, ಮಧುಸೂಧನ ಹೆಗಡೆ, ನೂರ್, ಮಹೇಶ ಶೆಟ್ಟಿ, ಮೋಹಿನಿ ಗೌಡ, ದೀಪಾ ಹಿಣಿ, ಗಣೇಶ ಅಂಬಿಗ, ಹರಿಹರ ನಾಯಕ, ಮಂಜುನಾಥ ಪಟಗಾರ, ಸಿ.ಜಿ. ಹೆಗಡೆ, ಮಹೇಶ ನಾಯ್ಕ, ಎಸ್.ವಿ. ಹೆಗಡೆ ಇತರರಿದ್ದರು.