ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಯಾವುದೇ ಕಾರಣಕ್ಕೂ ಅಳವಡಿಸುವುದು ಬೇಡ, ಈಗ ಹೊರಡಿಸಿರುವ ಆದೇಶವನ್ನು ಸರ್ಕಾರ ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಸೆಸ್ಕಾಂ ಇಂಜಿನಿಯರ್ ಮೂಲಕ ಇಂಧನ ಸಚಿವ ಕೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಲಾಯಿತು.ನಗರದ ಸೆಸ್ಕಾಂ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ಸೆಸ್ಕಾಂ ಅಭಿಯಂತರರ ಮೂಲಕ ಇಂಧನ ಸಚಿವ ಕೆ. ಜಾರ್ಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್‌ಪ್ರಭು, ಇಂಧನ ಇಲಾಖೆಯು ವಿದ್ಯುತ್ ಸ್ಮಾರ್ಟ್ ಮೀಟರ್ ಅನ್ನು ಅಳವಡಿಸಲು ಮುಂದಾಗಿದೆ ಆದರೆ ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ, ರೈತರ ಹಕ್ಕುಗಳು ಮತ್ತು ಒತ್ತಾಯಗಳನ್ನು ರಾಜ್ಯ ಬಜೆಟ್‌ನಲ್ಲಿ ಕಲ್ಪಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಮಂಡಿಸಿಲ್ಲ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ವಿದ್ಯುತ್ ಮೀಟರ್ ಅಳವಡಿಸುವುದಕ್ಕೆ ಮುಂದಾಗಿ ಹಿಂಬಾಗಿಲ ಮೂಲಕ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತರಿಗೆ ವಿದ್ಯುತ್ ಉಚಿತವಾಗಿ ನೀಡುವ ಮೂಲಕ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ವಿದ್ಯುತ್ ಮೀಟರ್ ಅಳವಡಿಸುವ ನೈತಿಕತೆ ಸರ್ಕಾರಕ್ಕೆ ಇಲ್ಲ, ಇದು ಖಾಸಗೀರಕರಣ ಮಾಡುವ ಹುನ್ನಾರ ಎಂದರು.
ರೈತರಿಗೆ ಅನುಕೂಲವಾಗುವಂತಹ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕು. ಅಲ್ಲದೇ ಮೈಸೂರು ಮತ್ತು ಚಾ.ನಗರ ಭಾಗಕ್ಕೆ ಎರಡನೇ ಹಂತದ ಕುಡಿಯುವ ಕಬಿನಿ ನೀರನ್ನು ಅನುಷ್ಠಾನ ಮಾಡಲು ಜಿಲ್ಲೆಯಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಕ್ರಮವಹಿಸಬೇಕು ಎಂದರು.ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುವ ಮೂಲಕ ಜನರ ಹಣವನ್ನು ಪೋಲು ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಹೊರ ರಾಜ್ಯಗಳಲ್ಲಿ 1800 ರು.ಗೆ. ಆಳವಡಿಕೆ ಮಾಡುತ್ತಿರುವ ಈ ಮೀಟರ್‌ಗೆ ನಮ್ಮ ರಾಜ್ಯದಲ್ಲಿ ಹೆಚ್ಚುವರಿ ಹಣವನ್ನು ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.
ತಕ್ಷಣ ಸರ್ಕಾರ ಈಗ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಇಲ್ಲದಿದ್ದರೆ ರೈತ ಸಂಘದಿಂದ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಕಾಡಹಳ್ಳಿ ಚಿನ್ನಸ್ವಾಮಿ, ಯಶ್ವಂತ್, ಜಯರಾಜು, ಮಹೇಶ್ ಕೆ. ಕುಮಾರ್, ಶೈಲೆಂದ್ರ, ಮಹದೇವಸ್ವಾಮಿ, ಮಲ್ಲಪ್ಪ, ರಂಗಸ್ವಾಮಿ ಇತರರು ಇದ್ದರು.